ಕಾಸರಗೋಡು, ಆ. 05 (DaijiworldNews/MB) : ಕಾಸರಗೋಡು ಬಂದರು ಸಮೀಪ ಪೊಲೀಸರ ಕಣ್ಣೆದುರಲ್ಲೇ ಸಮುದ್ರಕ್ಕೆ ಹಾರಿದ್ದ ಪೋಕ್ಸೋ ಆರೋಪಿಯ ಮೃತದೇಹ ಉಡುಪಿ ಸಮೀಪ ಕಡಲ ಕಿನಾರೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ.

ಕೂಡ್ಲು ಕಾಳ್ಯಾ೦ಗಾಡ್ನ ಮಹೇಶ್ ( 28) ಸಮುದ್ರಕ್ಕೆ ಹಾರಿದ್ದ ಆರೋಪಿ .
ಜುಲೈ 22 ಬೆಳಿಗ್ಗೆ ಮಾಹಿತಿ ಕಲೆಹಾಕಲು ಕಲೆ ಹಾಕಲು ಕಾಸರಗೋಡು ಬಂದರು ಬಳಿಗೆ ಕರೆ ತಂದ ಸಂದರ್ಭದಲ್ಲಿ ಈತ ತಪ್ಪಿಸಿ ಸಮುದ್ರಕ್ಕೆ ಹಾರಿದ್ದನು. ಈತನ್ನು ರಕ್ಷಿಸಲು ಜೊತೆಗಿದ್ದ ಪೊಲೀಸರು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಮಹೇಶ್ ಗಾಗಿ ಮುಳುಗು ತಜ್ಞರು, ಕರಾವಳಿ ರಕ್ಷಣಾ ಪಡೆ ಸಿಬಂದಿ ಗಳು ಹಾಗೂ ಸ್ಥಳಿಯರು ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ನಡುವೆ ಇಂದು ಬೆಳಿಗ್ಗೆ ಉಡುಪಿ ಸಮೀಪದ ಕಡಲ ಕಿನಾರೆಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಉಡುಪಿ ಪೊಲೀಸರು ನೀಡಿದ ಮಾಹಿತಿಯಂತೆ ಕಾಸರಗೋಡು ಪೊಲೀಸರು ತೆರಳಿದ್ದಾರೆ. ಈತನ ವಸ್ತ್ರ ಹಾಗೂ ಕೈಕೋಳ ದಿಂದ ಮೃತದೇಹ ಮಹೇಶ್ ನದ್ದೆಂದು ಗುರುತಿಸಲಾಗಿದೆ.
ಶೌಚಾಲಯದಲ್ಲಿ ಅಪ್ರಾಪ್ತ ಬಾಲಕಿಯ ದೃಶ್ಯವನ್ನು. ಮೊಬೈಲ್ ನಲ್ಲಿ ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಕ್ಸೋ ಕಾಯ್ದೆಯಂತೆ ಮಹೇಶ್ ನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದರು. ದೃಶ್ಯ ಸೆರೆ ಹಿಡಿದ ಮೊಬೈಲನ್ನು ಕಾಸರಗೋಡು ಬಂದರು ಸಮೀಪ ಕಲ್ಲಿನೆಡೆಯಲ್ಲಿಟ್ಟಿರುವುದಾಗಿ ನೀಡಿದ ಮಾಹಿತಿಯಂತೆ ಮೊಬೈಲ್ ಕಸ್ಟಡಿಗೆ ಪಡೆಯಲು ಕರೆ ತಂದಿದ್ದಾಗ ತಪ್ಪಿಸಿ ಸಮುದ್ರಕ್ಕೆ ಹಾರಿದ್ದನು. ಮೊಬೈಲನ್ನು ಬಳಿಕ ಪೊಲೀಸರು ಕಲ್ಲಿನೆಡೆಯಿಂದ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದರು.