ಮಂಗಳೂರು, ಆ 05 (DaijiworldNews/PY): ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಚುಟುಕು ಸಂಕಲನ-2020 ಬಿಡುಗಡೆ ಕಾರ್ಯಕ್ರಮ ವಾರ್ತಾ ಇಲಾಖೆ ಸಭಾಂಗಣದಲ್ಲಿ ಜರುಗಿತು.







ವಾರ್ತಾಧಿಕಾರಿ ಬಿ.ಎ.ಖಾದರ್ ಷಾ ಅವರು ಚುಟುಕಿನ 55 ಕವಿಗಳ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ಚುಟುಕು ಸಾಹಿತ್ಯದ ಕೊಡುಗೆ ಅಪಾರವಾದುದು. ಅಲ್ಲದೇ, ಚುಟುಕಿನೊಂದಿಗೆ ಕವಿಗಳನ್ನು ಕೂಡಾ ಪರಿಚಯ ಮಾಡುತ್ತಿರುವುದು ವಿಶೇಷ. ಇದರಿಂದ ಚುಟುಕು ಹಾಗೂ ಕವಿಗಳ ದಾಖಲೀಕರಣಗೊಳ್ಳುತ್ತದೆ. ಅಲ್ಲದೇ, ಇತಿಹಾಸದ ಭಾಗವಾಗಿ ಭವಿಷ್ಯದಲ್ಲಿ ಅಧ್ಯಯನಕ್ಕೆ ಇದು ನೆರವಾಗಲಿದೆ ಎಂದು ತಿಳಿಸಿದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಮಾತನಾಡಿ, ಚುಟುಕು ಸಾಹಿತ್ಯವನ್ನು ಯಕ್ಷಗಾನದಲ್ಲಿಯೂ ಕೂಡಾ ತಿಳಿದುಕೊಳ್ಳಬಹುದು. ಭಾಷಾಪ್ರಭುತ್ವತೆ ಸೇರಿದಂತೆ ಚಾತುರ್ಯ, ನೋವು-ನಲಿವು ಬೆಸೆಯುವಂತ ಅಂಶಗಳು ಚುಟುಕು ರಚನೆಯಲ್ಲಿ ಒಳಗೊಂಡಿವೆ ಎಂದು ಹೇಳಿದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೇಮಂಡ್ ಡಿಕುನಾ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ವಿಜಯಲಕ್ಷ್ಮಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಸುರೇಶ್ ನೆಗಳಗುಳಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.