ಮಂಗಳೂರು. ಏ 23: ಮುಂಬರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಜಿಲ್ಲೆಯ ಘಟಾನುಘಟಿ ನಾಯಕರ ನಾಮಪತ್ರ ಸಲ್ಲಿಕೆ ಇಂದು ನಡೆಯಲಿದೆ.
ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಕೆ ಆರಂಭಿಸಲಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೊ, ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೊಯ್ದಿನ್ ಬಾವಾ ಹಾಗೂ ಮಂಗಳೂರು ಕ್ಷೇತ್ರದಿಂದ (ಉಳ್ಳಾಲ ಕ್ಷೇತ್ರ) ಹಾಲಿ ಸಚಿವ ಯು.ಟಿ. ಖಾದರ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಶಾಸಕ ಜೆ.ಆರ್. ಲೋಬೊ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಬಳಿಕ ತಮ್ಮ ಬೆಂಬಲಿಗರೊಂದಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಮಂಜುನಾಥನ ಆಶೀರ್ವಾದವನ್ನು ಪಡೆದಿದ್ದಾರೆ. ಬಳಿಕ ಬಿಕರ್ಣಕಟ್ಟೆ ಬಾಲಯೇಸು ಪುಣ್ಯ ಕ್ಷೇತ್ರಕ್ಕೆ ತೆರಳಿದ ಅವರು ಅಲ್ಲಿ ತನ್ನ ಬೆಂಬಲಿಗರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಮರೋಳಿ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳ ಭೇಟಿಯ ಬಳಿಕ ಸುಮಾರು 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯ್ದಿನ್ ಬಾವಾ ಉರ್ವಾ ಮೈದಾನದಿಂದ ಮಹಾನಗರ ಪಾಲಿಕೆ ಕಚೇರಿಗೆ ಕಾಲ್ನಡಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಅಲ್ಲದೆ ಉಳ್ಳಾಲ ಕ್ಷೇತ್ರದಿಂದ ಸಚಿವ ಖಾದರ್ ಕೂಡ ಇಂದೇ ನಾಮಪತ್ರ ಸಲ್ಲಿಸುತ್ತಿದ್ದಾರೆ.
ಈ ನಡುವೆ ಮಂಗಳೂರು, ಮಂಗಳೂರು ಉತ್ತರ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಇನ್ನು ಕಗ್ಗಂಟಾಗಿಯೇ ಉಳಿದಿದೆ. ಜೆಡಿಎಸ್ ಕೂಡ ಈ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.