ಉಡುಪಿ, ಆ. 06 (DaijiworldNews/MB) : ಫಿನಾಯಿಲ್ ಮಾರಾಟ ಮಾಡುವ ನೆಪದಲ್ಲಿ ಮನೆಗೆ ಬಂದು ಫಿನಾಯಿಲ್ ವಾಸನೆಯಿಂದ ಪ್ರಜ್ಞಾಹೀನರನ್ನಾಗಿಸಿ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಕದಿಯುವ 'ಲೇಡೀಸ್' ಗ್ಯಾಂಗ್ ಬಗ್ಗೆ ಜನರು ಜಾಗೃತರಾಗಬೇಕೆಂದು ಮಣಿಪಾಲ ಪೊಲೀಸ್ ಠಾಣೆ ಹೆಸರಿನಲ್ಲಿ ನಕಲಿ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಣಿಪಾಲ ಪೊಲೀಸ್ ಅಧಿಕಾರಿಗಳು, "ನಾವು ಅಂತಹ ಯಾವುದೇ ಸಂದೇಶಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿಲ್ಲ. ಅಂತಹ ಯಾವುದೇ ಗ್ಯಾಂಗ್ಗಳು ಉಡುಪಿ ಅಥವಾ ಹತ್ತಿರದ ಯಾವುದೇ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿಲ್ಲ. ಈ ಘಟನೆ 10 ದಿನಗಳ ಹಿಂದೆ ವಿಜಯಪುರ ಜಿಲ್ಲೆಯಿಂದ ವರದಿಯಾಗಿದ್ದು ಈ ಬಗ್ಗೆ ವಿಜಯಪುರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ'' ಎಂದು ಹೇಳಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಸಂದೇಶದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಅಧಿಕೃತ ಮೊಬೈಲ್ ಸಂಖ್ಯೆ ಇದೆ. ಈ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಳ ಮತ್ತು ಮೊಬೈಲ್ ಸಂಖ್ಯೆ ಬದಲಾವಣೆ ಮಾಡಿ ಇದೇ ಸಂದೇಶವನ್ನು ಹರಡಲಾಗುತ್ತಿತ್ತು.