ಮೂಡುಬಿದ್ರೆ, ಆ 07 (DaijiworldNews/PY): ಸುಮಾರು 32 ವರ್ಷಗಳಿಂದ ಕತಾರ್ ನಿವಾಸಿಯಾಗಿದ್ದು, ಟೈಲರಿಂಗ್ ಉದ್ಯಮವನ್ನು ನಡೆಸುತ್ತಿದ್ದ ಮೂಡುಬಿದ್ರೆಯ ಹೂವಯ್ಯ ಮೊಯ್ಲಿ ಅವರು ಕತಾರ್ ಹಮದ್ ಮೆಡಿಕಲ್ ಕಾರ್ಪೋರೇಶನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಿಡ್ನಿ ವೈಫಲ್ಯದಿಂದ ಜುಲೈ 30ರಂದು ನಿಧನರಾಗಿದ್ದಾರೆ. ಇವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಪ್ರಸಕ್ತ ಸಂಕಷ್ಟದ ಸಂದರ್ಭದಲ್ಲಿ ಸೂಕ್ತ ವಿಮಾನದ ಕೊರತೆಯಲ್ಲೂ ಅವರ ಪಾರ್ಥಿವ ಶರೀರವನ್ನು ಅವರ ಊರಿಗೆ ತಲುಪಿಸಿ ಅವರ ಪತ್ನಿ, ಮಕ್ಕಳ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆದಿದ್ದು, ಕತಾರ್ನ ಎಲ್ಲಾ ತುಳು ಕನ್ನಡಿಗರಿಗೆ ಸಮಾಧಾನ ತಂದಿದೆ.
ಈ ಮೊದಲು ಆಗಸ್ಟ್ 3ರಂದು ಮಂಗಳೂರು ವಿಮಾನದಲ್ಲಿ ಪಾರ್ತಿವ ಶರೀರವನ್ನು ಕಳುಹಿಸಲು ಬೇಕಾದ ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿದ್ದರೂ ಕೊನೆ ಕ್ಷಣದಲ್ಲಿ ವಿಮಾನ ರದ್ದಾದ ಕಾರಣ ಆಗಸ್ಟ್ 5ರಂದು ದೋಹಾ ಕಣ್ಣೂರ್ ವಿಮಾನದಲ್ಲಿ ಪಾರ್ಥಿವ ಶರೀರವನ್ನು ತರಲು ನಿರ್ಧರಿಸಲಾಗಿತ್ತು. ಆದರೆ, ಕಣ್ಣೂರು ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರವನ್ನು ಹಸ್ತಾಂತರಿಸಲು ಸೂಕ್ತ ವ್ಯವಸ್ಥೆ ಹಾಗೂ ಅನುಮತಿ ಇಲ್ಲದ ಕಾರಣ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಅವರ ನೆರವನ್ನು ಕೋರಲಾಯಿತು. ಇಬ್ಬರು ಕೂಡಲೇ ಸ್ಪಂದಿಸಿದ್ದು, ಸಂಸದರು ಕೇಂದ್ರ ವಿದೇಶಾಂಗ ರಾಜ್ಯ ಸಚಿವ ಮುರಳೀಧರನ್ ಅವರನ್ನುಸಂಪರ್ಕಿಸಿ ಸೂಕ್ತ ಅನುಮತಿಯನ್ನು ಕೊಡಿಸುವಲ್ಲಿ ಸಫಲರಾಗಿದ್ದು, ಪಾರ್ಥಿವ ಶರೀರವನ್ನು ಯಾವುದೇ ಅಡೆತಡೆಗಳಿಲ್ಲದೇ ಹೂವಯ್ಯ ಅವರ ಹುಟ್ಟೂರಾದ ಮೂಡುಬಿದ್ರೆಗೆ ಕರೆತರಲಾಯಿತು.
ಈ ನಿಟ್ಟಿನಲ್ಲಿ ನಿಸ್ವಾರ್ಥ ಸೇವಾ ಮನೋಭಾವದಿಂದ ದುಡಿದ ಕತಾರ್ ದೂತವಾಸದ ಧೀರಜ್ ಕುಮಾರ್, ಕೇಂದ್ರ ವಿದೇಶಾಂಗ ರಾಜ್ಯ ಸಚಿವ ಮುರಳೀಧರನ್, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯು.ಟಿ.ಖಾದರ್, ಸಾಮಾಜಿಕ ಕಾರ್ಯಕರ್ತ ಮೆಹಬೂಬ್, ತುಳುಕೂಟ ಕತಾರ್ನ ಪೋಷಕರು ಹಾಗೂ ಮಾಜಿ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲ್, ತುಳುಕೂಟ ಕತಾರ್ನ ಅಧ್ಯಕ್ಷೆ ಚೈತಾಲಿ ಶೆಟ್ಟಿ, ಉಪಾಧ್ಯಕ್ಷ ಸಂದೇಶ್ ಆನಂದ್, ದಿನೇಶ್ ಶೆಟ್ಟಿ ಪರ್ಕಳ ಹಾಗೂ ಆಡಳಿತ ಸದಸ್ಯರಿಗೆ ಹೂವಯ್ಯ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರಿಂದ ಕೃತಜ್ಞತೆ ಸಲ್ಲಿಸಿದೆ.
ಕಣ್ಣೂರ್ ವಿಮಾನ ನಿಲ್ದಾಣದ ಇತಿಹಾಸದಲ್ಲಿ ಮೊದಲನೇ ಬಾರಿಗೆ ಪಾರ್ಥಿವ ಶರೀರವನ್ನು ಪಡೆದು ಹಸ್ತಾಂತರಿಸಲು ಬೇಕಾದ ಅನುಮತಿ ಹಾಗೂ ವ್ಯವಸ್ಥೆ ಒಂದೇ ದಿನದಲ್ಲಿ ದೊರಕಿರುವುದು ಈ ದುಃಖದ ಸಂದರ್ಭದಲ್ಲಿ ಎಲ್ಲರಿಗೂ ಸಮಾಧಾನ ತಂದಿದೆ ಎಂದು ಹೂವಯ್ಯ ಮೊಯ್ಲಿ ಅವರ ಕುಟುಂಬ ತಿಳಿಸಿದೆ.