ಕಾಸರಗೋಡು, ಆ. 07 (DaijiworldNews/HR): ಕರ್ನಾಟಕಕ್ಕೆ ತೆರಳಲು ಕೇರಳ ಸರಕಾರ ವಿಧಿಸಿರುವ ನಿರ್ಬಂಧವನ್ನು ಹಿಂತೆಗೆದು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ಶುಕ್ರವಾರ ಧರಣಿ ನಡೆಸಲಾಯಿತು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಅವರ ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ಕೆ.ಸುರೇಂದ್ರನ್ ಧರಣಿಯನ್ನು ಉದ್ಘಾಟಿಸಿದರು.
ಅಂತಾರಾಜ್ಯ ಸಂಚಾರಕ್ಕೆ ಕೇಂದ್ರ ಅನುಮತಿ ನೀಡಿದರೂ ಕೇರಳ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಕಾಸರಗೋಡಿನಿಂದ ಆಸ್ಪತ್ರೆ, ಶಿಕ್ಷಣ, ವ್ಯಾಪಾರ ಹಾಗೂ ಇನ್ನಿತರ ಅಗತ್ಯಗಳಿಗಾಗಿ ಮಂಗಳೂರನ್ನು ಆಶ್ರಯಿಸಿಕೊಂಡಿದ್ದು, ಕೇರಳ ಸರಕಾರದ ಧೋರಣೆಯಿಂದ ಗಡಿ ಪ್ರದೇಶದ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ರೈ, ಅಧ್ಯಕ್ಷತೆ ವಹಿಸಿದ್ದರು. ವಲಯ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.