ಉಡುಪಿ, ಆ 07 (DaijiworldNews/PY): ಕಾಂಗ್ರೆಸ್ ನಾಯಕರ ಕಣ್ಣಿಗೆ ಕಾಣುವುದೆಲ್ಲಾ ಹಳದಿ. ಬಿಜೆಪಿಯಿಂದ ಕಾಂಗ್ರೆಸ್ಗೆ ಆಗುವ ಕಾಟಕ್ಕಿಂತ ಸಿದ್ದರಾಮಯ್ಯ ಅವರ ಕಾಟವೇ ಜಾಸ್ತಿಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಹ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ರಾಜ್ಯದಲ್ಲಿ ಇದ್ದಾರೋ ಇಲ್ಲವೋ ಎಂದು ಸಂಶಯವಾಗುತ್ತಿದೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೂಡಾ ಇರುವುದು ಅನುಮಾನ. ಸನ್ಮಾನ ಸ್ವೀಕಾರ ಮಾಡುವುದರಲ್ಲೇ ಇದ್ದಾರೆ. ರಾಜ್ಯ ಸರ್ಕಾರ ಕಳೆದ ಬಾರಿ ಪ್ರವಾಹ ಪರಿಹಾರಕ್ಕೆ ಬಿಡುಗಡೆ ಮಾಡಿದಷ್ಟು ಹಣವನ್ನು ಯಾರೂ ಕೂಡಾ ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.
ವಿರೋಧ ಪಕ್ಷದವರ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಗೆ ಬಿಜೆಪಿಗಿಂತ ಸಿದ್ದರಾಮಯ್ಯ ಅವರ ಕಾಟ ಜಾಸ್ತಿ. ವಿರೋಧ ಪಕ್ಷದವರು ಸುಖಾಸುಮ್ಮನೆ ಟೀಕೆ ಮಾಡುತ್ತಾ ಇದ್ದಾರೆ. ಯಾವುದೇ ರೀತಿಯಾದ ಸಲಹೆ ನೀಡಿದರೂ ಕೂಡಾ ಸ್ವೀಕಾರ ಮಾಡಲು ನಾವು ಸಿದ್ದ ಎಂದು ಹೇಳಿದರು.
ಸಿಎಂ ಬಿಎಸ್ವೈ ಅವರ ಆರೋಗ್ಯದ ಬಗ್ಗೆ ಕೇಳಿದಾಗ ಉತ್ತರಿಸಿದ ಅವರು, ಸಿಎಂ ಬಿಎಸ್.ಯಡಿಯೂರಪ್ಪ ಅವರು ಆರೋಗ್ಯವಾಗಿದ್ದಾರೆ. ಸರಕಾರ ನಡೆಸಲು ಸಮರ್ಥರಾಗಿದ್ದಾರೆ. ಅವರು ಆಸ್ಪತ್ರೆಯಲ್ಲಿದ್ದರೂ ಕೂಡಾ ಸರಕಾರದ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾರೆ. ಅಲ್ಲದೇ, ಎಲ್ಲಾ ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ಮುಖ್ಯಮಂತ್ರಿಗಳು ಶೀಘ್ರವೇ ಗುಣಮುಖರಾಗಲಿ ಎಂದರು.