ಮಂಗಳೂರು, ಆ. 07 (DaijiworldNews/SM): ನಗರದ ಕದ್ರಿ ಕಂಬಳದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಇದರ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಯುವತಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಘಟನೆಯ ತೀವ್ರತೆಗೆ ಯುವತಿ ಕಾರಿನಡಿಯಲ್ಲಿ ಸಿಲುಕಿಕೊಂಡಿದ್ದಾಳೆ.


ಕಾರು ಚಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಯುವತಿ ಕಾರಿನ ಮೇಲೆ ಎಸೆಯಲ್ಪಟ್ಟಿದ್ದಾಳೆ. ಬಳಿಕ ಆಕೆ ರಸ್ತೆಗೆ ಬಿದ್ದಿದ್ದು, ಕಾರು ಆಕೆಯನ್ನು ತಳ್ಳಿಕೊಂಡು ಮುಂದಕ್ಕೆ ಸಾಗಿದೆ. ಅಲ್ಲದೆ ಯುವತಿ ಕಾರಿನಡಿ ಸಿಲುಕಿಕೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಜೊತೆಯಾಗಿ ಕಾರನ್ನು ಎತ್ತಿ ಯುವತಿಯನ್ನು ರಕ್ಷಿಸಿದ್ದಾರೆ.
ಆಪತ್ಬಾಂದವರಾದ ಶಾಸಕ ಖಾದರ್:
ಇನ್ನು ಘಟನೆ ನಡೆದ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದಂತಹ ಶಾಸಕ ಯು.ಟಿ. ಖಾದರ್ ಯುವತಿಯನ್ನು ತನ್ನ ಕಾರಿನ ಮೂಲಕ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ. ಶಾಸಕ ಖಾದರ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.