ಮಂಗಳೂರು, ಆ 08 (DaijiworldNews/PY): ಕಳೆದ ವರ್ಷ ಡಿಸೆಂಬರ್ 19 ರಂದು ನಗರದಲ್ಲಿ ಸಿಎಎ ತಿದ್ದುಪಡಿ ಕಾಯ್ದೆ ವಿರುದ್ದ ನಡೆದ ಪ್ರತಿಭಟನೆಯ ಸಂದರ್ಭ ಗುಂಡೇಟಿಗೆ ಇಬ್ಬರು ಮೃತಪಟ್ಟ ಬಗ್ಗೆ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಆದೇಶಿಸಲಾಗಿದ್ದು, ಮ್ಯಾಜಿಸ್ಟೀರಿಯಲ್ ವಿಚಾರಣೆಯನ್ನು ಆಗಸ್ಟ್ 11 ಕ್ಕೆ ನಿಗದಿಪಡಿಸಲಾಗಿದೆ.

ಸಿಎಎ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅಬ್ದುಲ್ ಜಲೀಲ್ ಹಾಗೂ ನೌಶೀನ್ ಎಂಬವರು ಸಾವನ್ನಪ್ಪಿದ್ದರು. ಜನರ ಸಾಕ್ಷ್ಯಗಳನ್ನು ಹಾಗೂ ದಾಖಲೆಗಳನ್ನು ಸಲ್ಲಿಸಲು ಆಗಸ್ಟ್ 11ರವರೆಗೆ ಅವಕಾಶವಿದೆ ಎಂದು ಮ್ಯಾಜಿಸ್ಟೀರಿಯಲ್ ವಿಚಾರಣಾ ಅಧಿಕಾರಿಯಾಗಿ ನೇಮಕಗೊಂಡಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ಇರುವ ಜನರು ಅಥವಾ ಪ್ರತ್ಯಕ್ಷದರ್ಶಿಗಳು ಆಗಸ್ಟ್ 11ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ನಡುವೆ ನಗರದ ಹಂಪನಕಟ್ಟೆಯಲ್ಲಿರುವ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ವೈಯುಕ್ತಿಕವಾಗಿ ಹಾಜರಾಗಬಹುದು. ಅದರ ಬಳಿಕ ಯಾವುದೇ ಹೇಳಿಕೆಗಳನ್ನು ಅಥವಾ ಸಾಕ್ಷ್ಯಗಳನ್ನು ಜನರಿಂದ ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.