ಕಾಸರಗೋಡು, ಆ 08(DaijiworldNews/HR) : ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಗ್ಗುಪ್ರದೇಶ ಜಲಾವೃತಗೊಂಡಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ.





ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿದ ಪರಿಣಾಮ ಪ್ರವಾಹ ಸ್ಥಿತಿ ಉಂಟಾಗಿದ್ದು, ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ.
ತೇಜಸ್ವಿನಿ ನದಿ ಉಕ್ಕಿ ಹರಿಯುತ್ತಿರುವುದರಿಂದ ನೀಲೇಶ್ವರ ನಗರಸಭೆಯ ಕಾರ್ಯಂಗೊಡು , ನಿಲಾಯಿ, ಪಾಲಯಿ ಹಾಗೂ ಇನ್ನಿತರ ಸ್ಥಳಗಳಿಗೆ ನೀರು ನುಗ್ಗಿದೆ. ಅಲ್ಲಿದ್ದ 15ರಷ್ಟು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇನ್ನು ಭೀಮನಡಿ ಕೊನ್ನಕ್ಕೊಡ್ ನಲ್ಲಿ ಭೂಕುಸಿತ ಉಂಟಾಗಿ ಮುತ್ತಾಡಿ ಕಾಲನಿಯ ಆರು ಮನೆಗಳನ್ನು ಸ್ಥಳಾಂತರಿಸಲಾಗಿದೆ.
ಇಂದು ಮುಂಜಾನೆ ಬಾಯಾರು ಮುಳಿಗದ್ದೆಯಲ್ಲಿ ಮಣ್ಣು ಕುಸಿದಿದ್ದು ಶಬ್ದ ಕೇಳಿ ಮನೆಯವರು ಹೊರಗೆ ಓಡಿದರಿಂದ ಅಪಾಯ ತಪ್ಪಿದೆ. ಅಲ್ಲಿದ್ದ 15 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಉಪ್ಪಳ, ಕುಂಬಳೆ, ಕಾಸರಗೋಡು ತೀರದಲ್ಲಿ ಕಡಲ್ಕೊರೆತದ ಅಬ್ಬರ ತೀವ್ರಗೊಂಡಿದ್ದು, 25 ಕ್ಕೂ ಅಧಿಕ ಮನೆಗಳು ಅಪಾಯದಲ್ಲಿದೆ. ಉಪ್ಪಳ ಮುಸೋಡಿಯಲ್ಲಿ ಕಾಂಕ್ರೀ ಟ್ ರಸ್ತೆ ಕೊಚ್ಚಿ ಹೋಗಿದೆ.
ಪುತ್ತಿಗೆ ಅಂಗಡಿಮೊಗರು ಹೊಳೆಯು ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕಾಸರಗೋಡು ತೆರುವತ್ ಹೊನ್ನಮೂಳೆಯಲ್ಲಿ16 ಮನೆಗಳಿಗೆ ನೀರು ನುಗ್ಗಿದೆ. ಹೊಳೆ ಬದಿಯ ತಳಂಗರೆ ಕೊಪ್ಪಲ್ ಪರಿಸರದಲ್ಲಿ 150 ರಷ್ಟು ಮನೆಗಳು ದ್ವೀಪದಂತಿದೆ.
ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಈ ಪ್ರದೇಶದ ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ . ಜಿಲ್ಲೆಯ ಹಲವು ಕಡೆ ರಸ್ತೆ ಕೊಚ್ಚಿ ಹೋಗಿದ್ದು, ಸಂಚಾರಕ್ಕೂ ಅಡ್ಡಿಯಾಗಿದೆ. ಮಳೆ ಬಿರುಸುಗೊಳ್ಳುತ್ತಿರುವ ಹಿನ್ನಲೆಯಲ್ಲಿ ಭೂಕುಸಿತಕ್ಕೂ ಸಾಧ್ಯತೆ ಇದೆ ಇದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.