ಕುಂದಾಪುರ, ಆ 08 (DaijiworldNews/PY): ಕಡಲ ಮೀನುಗಾರಿಕೆಯಲ್ಲಿ ಕರ್ನಾಟಕ ದೇಶದಲ್ಲಿ 6ನೇ ಸ್ಥಾನದಲ್ಲಿದೆ. ಒಳನಾಡು ಮೀನುಗಾರಿಕೆಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನೂ ಮೂರು ವರ್ಷಗಳಲ್ಲಿ ಕರ್ನಾಟಕ ಮೀನುಗಾರಿಕೆಯಲ್ಲಿ ಪ್ರಥಮ ಸ್ಥಾನಕ್ಕೆ ಬರಬೇಕು. ಆ ಹಿನ್ನೆಲೆಯಲ್ಲಿ ಪಂಜರ ಮೀನು ಕೃಷಿಯಂತಹ ಒಳನಾಡು ಮೀನುಕೃಷಿಯನ್ನು ಉತ್ತೇಜಿಸುವುದು, ಕಡಲ ಮೀನುಗಾರಿಕೆಯಲ್ಲಿ ಹೊಸ ವಿಧಾನ ಮತ್ತು ನೈಪುಣ್ಯತೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೀನುಗಾರಿಕೆಯಲ್ಲಿ ಸ್ವಾವಲಂಬನೆಯೊಂದಿಗೆ ಸಾಧನೆ ಮಾಡಬೇಕಿದೆ ಎಂದು ಮುಜರಾಯಿ, ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.








ಕರ್ನಾಟಕ ಸರ್ಕಾರ, ಮೀನುಗಾರಿಕೆ ಇಲಾಖೆ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆ.8ರಂದು ನಡೆದ ಪಂಜರದಲ್ಲಿ ಮೀನು ಕೃಷಿ ತರಬೇತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪಂಜರದಲ್ಲಿ ಮೀನು ಕೃಷಿ ಯಶಸ್ವಿಯಾಗಿ ನಡೆಯಬೇಕು. ತರಬೇತಿ ಪಡೆದವರು ಇಲಾಖೆಯ ಮಾರ್ಗದರ್ಶನದಲ್ಲಿ ಮೀನು ಕೃಷಿ ಕೈಗೊಳ್ಳಬೇಕು. ರಾಜ್ಯದಲ್ಲಿ 26 ಸಾವಿರ ಕೆರೆಗಳ ಅಭಿವೃದ್ದಿಗೊಳಿಸಿ ಒಳನಾಡು ಮೀನುಗಾರಿಕೆಗೆ ಅಳವಡಿಸುವ ಆಶಯ ಹೊಂದಿದ್ದೇವೆ. ಎಲ್ಲ ಮೀನುಗಾರರಿಗೆ ಕಿಸಾನ್ ಕಾರ್ಡ್ ನೀಡುವ ಯೋಜನೆ, 3 ಸಾವಿರ ಮೀನುಗಾರಿಕಾ ಮನೆಗಳ ನಿರ್ಮಾಣ ಆ ಮೂಲಕ ಪ್ರತೀ ಕ್ಷೇತ್ರಕ್ಕೂ 100 ಮನೆಗಳ ನಿರ್ಮಾಣ ಕೂಡಲೇ ಆಗಲಿದೆ. 3 ವರ್ಷದಿಂದ ಕೇಂದ್ರ ಉಳಿತಾಯ ಪರಿಹಾರ ಹಣ ಬಿಡುಗಡೆಯಾಗಿರಲಿಲ್ಲ. ಈ ಬಾರಿ ರಾಜ್ಯ ಹಾಗೂ ಕೇಂದ್ರದ ವತಿಯಿಂದ 11 ಕೋಟಿ ರೂ ಉಳಿತಾಯ ಪರಿಹಾರದ ಹಣ ಬಿಡುಗಡೆಯಾಗಿದೆ ಎಂದರು.
ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಡಿಸೇಲ್ ಸಬ್ಸಿಡಿಯ ಬಗ್ಗೆ ಆತಂಕವಿತ್ತು. ಆದರೆ 45 ಕೋಟಿ ರೂ ಡಿಸೇಲ್ ಸಬ್ಸಿಡಿ ಸರ್ಕಾರ ಬಿಡುಗಡೆ ಮಾಡಿದೆ. 23 ಸಾವಿರ ಮೀನುಗಾರ ಮಹಿಳೆಯರ 60 ಕೋಟಿ ರೂ. ಸಾಲ ಮನ್ನಾ ಮಾಡಿದ್ದು ಒಂದು ಕ್ರಾಂತಿ. ಅದರಲ್ಲಿ 19 ಸಾವಿರ ಮೀನುಗಾರ ಮಹಿಳೆಯರು ಉಡುಪಿ ಜಿಲ್ಲೆಯವರು ಎನ್ನುವುದು ವಿಶೇಷ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಅಭಿನಂದಿಸಬೇಕು ಎಂದರು.
ತಂತ್ರಜ್ಞಾನವನ್ನು ಮೀನುಗಾರಿಕೆಯಲ್ಲಿ ಅಳವಡಿಕೆ ಮಾಡಿಕೊಂಡು ಮೀನುಗಾರರು ಸ್ವಾವಲಂಬಿಗಳಾಗಬೇಕು. ಕಟ್ಟಕಡೆಯ ಮೀನುಗಾರರು ಕೂಡಾ ಸ್ವಂತ ತಮ್ಮ ಕಾಲಮೇಲೆ ನಿಲ್ಲಬೇಕು. ಮೀನುಗಾರರ ಸಮಸ್ಯೆ, ಸವಾಲುಗಳು, ಆತಂಕಗಳ ನಿವಾರಣೆಯಾಗಬೇಕು. ಕೃಷಿ-ಮೀನುಗಾರಿಕೆ ಸರ್ಕಾರಕ್ಕೆ ಎರಡು ಕಣ್ಣು ಇದ್ದಂತೆ ಎಂದು ಸಚಿವರು ಹೇಳಿದರು.
ತಾಲೂಕು ಪಂಚಾಯತಿ ಅಧ್ಯಕ್ಷ ರಾಮ್ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಜಿಲ್ಲಾ ಪಂಚಾಯತಿ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ತಾ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರೂಪ ಪೈ,ವಿಜ್ಞಾನಿ ಪ್ರತಿಭಾ ರೋಹಿತ್ ಉಪಸ್ಥಿತರಿದ್ದರು.
ಮುಕುಂದ ಪ್ರಾರ್ಥಿಸಿದರು. ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೆ.ಗಣೇಶ್ ಸ್ವಾಗತಿಸಿದರು. ಮೀನುಗಾರಿಕಾ ಇಲಾಖೆ ಬೆಂಗಳೂರು ಇದರ ನಿರ್ದೇಶಕ ರಾಮಾಚಾರ್ಯ ಪ್ರಾಸ್ತವಿಕ ಮಾತುಗಳನ್ನಾಡಿದರು. ಮೀನುಗಾರಿಕಾ ಸಹಾಯಕ ನಿರ್ದೇಶಕ ಚಂದ್ರಶೇಖರ ಕಾರ್ಯಕ್ರಮ ನಿರ್ವಹಿಸಿ, ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಎಂ.ಶಿವಕುಮಾರ್ ವಂದಿಸಿದರು.