ಬಂಟ್ವಾಳ, ಆ 08 (DaijiworldNews/PY): ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಲೇ ಇದೆ.




ಧಾರಾಕಾರ ಸುರಿದ ಮಳೆಯಿಂದಾಗಿ ಬಂಟ್ವಾಳ ಪೇಟೆಯ ಬಡ್ಡಕಟ್ಟೆ ಪ್ರದೇಶದ ತಗ್ಗು ಪ್ರದೇಶದಲ್ಲಿರುವ ಅಂಗಡಿ-ಮುಂಗಟ್ಟಗಳು ಮುಳುಗಿಹೋಗಿವೆ. ಅಲ್ಲದೇ, ಬಂಟ್ವಾಳ-ಜಕ್ರಿಬೆಟ್ಟು ರಸ್ತೆ ಹಾಗೂ ಗೂಡಿನಬಳಿ ಪ್ರದೇಶದಲ್ಲೂ ಕೂಡಾ ಪ್ರವಾಹದ ನೀರು ನುಗ್ಗಿದ್ದು, ಸಂಚಾರ ಬಂದ್ ಮಾಡಲಾಗಿದೆ. ಇನ್ನು ಆಲಡ್ಕ ಪ್ರದೇಶದಲ್ಲಿರುವ ಮನೆಗಳೂ ಕೂಡಾ ಜಲಾವೃತ್ತವಾಗಿವೆ. ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
ಸತತ ನಾಲ್ಕನೆಯ ದಿನವೂ ಭಾರೀ ಮಳೆ ಮುಂದುವರಿದಿದ್ದು, ಅಜಿಲಮೊಗರು ಮಸೀದಿಯ ಆವರಣವು ಸಂಪೂರ್ಣ ಮುಳುಗಡೆಯಾಗಿದೆ. ಅಲ್ಲದೇ, ಮೆಲ್ಕಾರ್-ಪಾಣೆಮಂಗಳೂರು ಸಂಚಾರ ಬಂದ್ ಆಗಿದೆ. ಬೆಳ್ತಂಗಡಿ ತಾಲೂಕಿನ ಕಪಿಲ ನದಿ, ಶಿಶಿಲ ನದಿಗಳು ಕೂಡಾ ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.