ಉಡುಪಿ, ಏ 23: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಚುನಾವಣಾ ಕಚೇರಿಗೆ ಆಗಮಿಸಿದ ಸಚಿವ ಪ್ರಮೋದ್ ಮಧ್ವರಾಜ್, ತನ್ನ ತಾಯಿಯನ್ನು ಜೊತೆಗೆ ಕರೆದುಕೊಂಡು ಬಂದಿದ್ದರು. ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಅವರನ್ನು ಕರೆದುಕೊಂಡು ಬಂದಿದ್ದು, ಅವರನ್ನು ಬಳಿಯಲ್ಲಿ ಇರಿಸಿಕೊಂಡೆ ನಾಮಪತ್ರವನ್ನು ಸಲ್ಲಿಸಿದರು.
ಬೆಳಗ್ಗೆ ಕೊಳಲಗಿರಿಯ ತಮ್ಮ ನಿವಾಸ ಹಾಗೂ ಹೆಜಮಾಡಿಯಲ್ಲಿರುವ ಮೂಲಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಪ್ರಮೋದ್ ಮಧ್ವರಾಜ್, ಬಳಿಕ ಮಲ್ಪೆಯಲ್ಲಿರುವ ತಂದೆ ಮಧ್ವರಾಜ್ ಸಮಾಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ವಿಶೇಷವೆಂದರೆ, ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ರಘಪತಿ ಭಟ್ ಅವರು ತಮ್ಮ ತಾಯಿ ಸರಸ್ವತಿಯವರ ಜೊತೆ ತಾಲೂಕು ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದಿದ್ದರು. ಈ ಸಂದರ್ಭ ರಘುಪತ್ ಭಟ್ ರ ತಾಯಿಯನ್ನು ನೋಡಿದ ಮಧ್ವರಾಜ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.