ಮಂಗಳೂರು, ಆ 08 (DaijiworldNews/PY): ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಮನೆಗಳಿಂದ ಜನರನ್ನು ಕೂಡಲೇ ಸ್ಥಳಾಂತರಿಸಲು ಪೊಲೀಸರಿಗೆ ತಿಳಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.




ಆಗಸ್ಟ್ 8 ರ ಶನಿವಾರ ಜಿಲ್ಲಾ ಪಂಚಾಯತ್ನಲ್ಲಿ ಪ್ರವಾಹಕ್ಕೆ ಸಂಬಂಧಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಮಾಹಿತಿ ನೀಡಿದ್ದರೂ, ಅನೇಕ ಬಾರಿ ಅವರು ಅಧಿಕಾರಿಗಳ ಮಾತುಗಳನ್ನು ನಿರ್ಲಕ್ಷಿಸಿ ಪ್ರವಾಹದ ಸಮಯದಲ್ಲಿ ತೊಂದರೆಗೆ ಸಿಲುಕುತ್ತಾರೆ. ಅಂತಹ ಸಂದರ್ಭದಲ್ಲಿ ಅಧಿಕಾರಿಗಳು ಅಗತ್ಯವಿದ್ದರೆ ಪೊಲೀಸರಿಗೆ ತಿಳಿಸಬೇಕು ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಮನೆಗಳಿಂದ ಜನರನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ತಿಳಿಸಿದರು.
ಪರಿಹಾರ ಕೇಂದ್ರಗಳಲ್ಲಿ ಜನರಿಗೆ ಆಹಾರವನ್ನು ಒದಗಿಸುವಲ್ಲಿ ಅಧಿಕಾರಿಗಳು ಜಿಪುಣರಾಗಬಾರದು. ಅಕ್ಕಿ ಮತ್ತು ಸಾಂಬಾರ್ ಹೊರತುಪಡಿಸಿ ಅವರು ಮೊಟ್ಟೆ, ಉಪ್ಪಿನಕಾಯಿ ಮುಂತಾದ ಇತರ ಆಹಾರ ಪದಾರ್ಥಗಳನ್ನು ಒದಗಿಸಬೇಕು ಮತ್ತು ಪ್ರತಿ ಎರಡು ದಿನಗಳಿಗೊಮ್ಮೆ ಆಹಾರ ತಜ್ಞರನ್ನುಸಂಪರ್ಕಿಸಿ ಆಹಾರದ ಪಟ್ಟಿಯನ್ನು ಬದಲಾಯಿಸಬೇಕು ಎಂದರು.
ಮನೆಗಳಿಗೆ ಒಂದು ಇಂಚು ನೀರು ಪ್ರವೇಶಿಸಿದರೂ ಕೂಡಾ ಅವರಿಗೆ 10,000 ರೂ.ಗಳನ್ನು ಯಾವುದೇ ಹಿಂಜರಿಕೆಯಿಲ್ಲದೇ ನೀಡಬೇಕು. ಒಂದು ವೇಳೆ ಮನೆಗಳ ಮೇಲೆ ಮರ, ವಿದ್ಯುತ್ ಕಂಬ ಅಥವಾ ಗಾಳಿಯಿಂದ ಹಾನಿಗೊಳಗಾದರೆ ಅದನ್ನು ಪ್ರವಾಹ ವಿಪತ್ತು ಎಂದು ಪರಿಗಣಿಸಬೇಕು ಎಂದು ತಿಳಿಸಿದರು.
ಪ್ರವಾಹವನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ಜಾಗರೂಕರಾಗಿರಬೇಕು ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಪರಿಸ್ಥಿತಿ ಕೈ ಮೀರುವ ಮೊದಲು ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಮಗೆ ಕೆಲವು ಪ್ರವಾಹ ಪೀಡಿತ ಪ್ರದೇಶಗಳು, ಭೂಕುಸಿತ ಮತ್ತು ಕಡಲ್ಕೊರೆತ ಪ್ರದೇಶಗಳು ತಿಳಿದಿವೆ. ಯಾವುದೇ ಅಹಿತಕರ ಘಟನೆ ಸಂಭವಿಸುವ ಮೊದಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಈ ಪ್ರವಾಹದ ಸಮಯದಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳುವುದು, ಕೆಲವು ಜನರು ತಮ್ಮ ವಾಹನಗಳಲ್ಲಿ ಸೇತುವೆಗಳನ್ನು ದಾಟಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗುವ ಮೂಲಕ ಪ್ರಾಣ ಕಳೆದುಕೊಂಡ ಹಲವಾರು ಉದಾಹರಣೆಗಳಿವೆ. ನದಿ ದಾಟುವ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಪ್ರವಾಹದ ಸಮಯದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಾಹಸಮಯ ಕೆಲಸಗಳನ್ನು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಕಳೆದ 24 ಗಂಟೆಗಳಲ್ಲಿ 90 ಮಿ.ಮೀ ಮಳೆಯಾಗಿದೆ, ಈ ಪೈಕಿ ಬೆಳ್ತಂಗಡಿ ಮತ್ತು ಸುಳ್ಯ ಹಾಗೂ ಇತರ ತಾಲೂಕುಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ನಾವು 32 ಕುಟುಂಬಗಳನ್ನು ಪ್ರವಾಹ ಪೀಡಿತ ಪ್ರದೇಶದಿಂದ ಮಿತ್ತಬೈಲ್ನ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಿದ್ದೇವೆ ಎಂದು ತಿಳಿಸಿದರು.
ನೇತ್ರಾವತಿ ನೀರಿನ ಮಟ್ಟವು 8.5 ಮೀಟರ್ ಅಪಾಯದ ಮಟ್ಟವನ್ನು ದಾಟಿದ್ದರಿಂದ ಬಂಟ್ವಾಳದ ಅನೇಕ ಪ್ರದೇಶಗಳು ಮುಳುಗಡೆಯಾಗಿವೆ. ಬಂಟ್ವಾಳದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪರಿಹಾರ ಕೇಂದ್ರಗಳು ಸಿದ್ಧವಾಗಿವೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಹೇಳಿದರು.
ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಪ್ರತಿವರ್ಷ ಚಾರ್ಮಾಡಿ ಘಾಟ್ನಲ್ಲಿ ಇಂತಹ ಪರಿಸ್ಥಿತಿ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಚಾರ್ಮಾಡಿ ಘಾಟ್ನಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಶಾಶ್ವತ ಪರಿಹಾರವನ್ನು ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಡಲ್ಕೊರೆತ ನಿವಾರಿಸಲು, ರೈತರಿಗೆ ಪರಿಹಾರ ನೀಡಲು, ಹಾನಿಗೊಳಗಾದ ರಸ್ತೆಗಳನ್ನು ಪುನರ್ನಿರ್ಮಿಸಲು, ತಡೆಗೋಡೆ ನಿರ್ಮಿಸಲು ಹಣವನ್ನು ಬಿಡುಗಡೆ ಮಾಡುವಂತೆ ಜಿಲ್ಲಾ ಶಾಸಕರು ಸಚಿವರನ್ನು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಡಿಸಿಪಿ ಅರುಣಂಶುಗಿರಿ, ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಡಾ.ಭರತ್ ವೈ ಶೆಟ್ಟಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ಶಾಸಕ ಉಮಾನಾಥ್ ಕೋಟ್ಯಾನ್, ಎಂಎಲ್ಸಿ ಪ್ರತಾಪ್ ಸಿಂಹಾ ನಾಯಕ್ ಮತ್ತು ಇತರರು ಉಪಸ್ಥಿತರಿದ್ದರು.