ಮಂಗಳೂರು, ಏ 23: ಬೆಹರೈನ್ ನಲ್ಲಿ ಮಂಗಳೂರು ಕನ್ನಡ ಸಂಘ ಆಯೋಜಿಸಿರುವ ವಸಂತೋತ್ಸವ ಕಾರ್ಯಕ್ರಮದಲ್ಲಿ ಕರಾವಳಿಯ ಅಪ್ರತಿಮ ಚಿತ್ರ ಕಲಾವಿದೆ ಶಬರಿ ಗಾಣಿಗ ಭಾಗವಹಿಸಲಿದ್ದಾರೆ.
ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹುಟ್ಟಿಕೊಂಡ ಈ ಸಂಸ್ಥೆಯು ಹಲವಾರು ವರುಷಗಳಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಗೊಳಿಸಿದೆ. ಇದೀಗ ನಮ್ಮ ರಾಜ್ಯದ ಆಚಾರ, ವಿಚಾರ, ಕಲೆ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲಿಯೂ ಪಸರಿಸುವ ಉದ್ದೇಶದಿಂದ ಈ ವಸಂತೋತ್ಸವ ಕಾರ್ಯಕ್ರಮವನ್ನು ಬೆಹರೈನ್ ನಲ್ಲಿ ಮತ್ತೇ ಆಯೋಜಿಸಲಾಗಿದೆ.
ಏ.27ರಂದು ಬೆಹರೈನ್ ಮನಮಾದ ಗುದೇಬಿಯಾದ ಇಂಡಿಯನ್ ಕ್ಲಬ್ ನಲ್ಲಿ ಈ ವಸಂತೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಚಿತ್ರ ಕಲಾವಿದೆ ಶಬರಿ ಗಾಣಿಗ ಪಾಲು ಪಡೆಯಲಿರುವುದು ವಿಶೇಷ. ಈ ಕಲಾಚತುರೆ ಬರೀ ಮೂರು ನಿಮಿಷದಲ್ಲಿ ಪೇಂಟಿಂಗ್ ಮಾಡುತ್ತಾಳೆ. ರಾಜ್ಯದ ವೇಗದ ಚಿತ್ರ ಬಿಡಿಸುವ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಬರಿ ಗಾಣಿಗ ಸಂಗೀತ, ಕ್ರಾಫ್ಟ್, ಚಿತ್ರಕಲೆ, ರಂಗೋಲಿ, ಕೀಬೋರ್ಡ್ ಹೀಗೆ ಎಲ್ಲಾ ಕಲೆಗಳನ್ನು ತನ್ನೊಳಗೆ ಹುದುಗಿಕೊಂಡ ವಿಶೇಷ ಪ್ರತಿಭೆ. ವಿನೂತನ ಕೈಚಳಕದ ಮೂಲಕ ಇಡೀ ದೇಶದಲ್ಲೇ ಅತ್ಯಂತ ವೇಗದಿಂದ ಚಿತ್ರ ಬಿಡಿಸುವ ಮೊದಲ ಮಹಿಳಾ ಚಿತ್ರಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಂಗಳೂರು ಹುಡುಗಿ ಶಬರಿ ಗಾಣಿಗ ಬಿ. ಯೋಗೀಶ್ ಕುಮಾರ್ ಗಾಣಿಗ, ಎಂ. ಶಶಿಕಲಾ ದಂಪತಿಯ ಪುತ್ರಿ. ಶಬರಿ ಬಾಲ್ಯದಲ್ಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಇದೀಗ ತಮ್ಮ ಪ್ರತಿಭೆಯನ್ನು ವಿದೇಶದಲ್ಲಿಯೂ ಪಸರಿಸಲು ಈ ಪ್ರತಿಭೆಗೆ ಅದ್ಭುತ ಅವಕಾಶ ಸಿಕ್ಕಿದೆ.