ಮಂಗಳೂರು, ಆ. 08 (DaijiworldNews/MB) : ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಹವಮಾನ ಇಲಾಖೆಯು ಆಗಸ್ಟ್ 8 ಹಾಗೂ 9 ರಂದು ರೆಡ್ ಅಲರ್ಟ್ ಘೋಷಿಸಿದೆ. ಹಾಗೆಯೇ ಆಗಸ್ಟ್ 11 ರಂದು ಆರಂಜ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆ ಸಾರ್ವಜನಿಕರು ಎಚ್ಚರವಾಗಿರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಜಿಲ್ಲಾಧಿಕಾರಿ, ಸಾರ್ವಜನಿಕರು ನದಿ, ಸಮುದ್ರಕ್ಕೆ ಇಳಿಯಬಾರದು ಎಚ್ಚರವಾಗಿರಬೇಕು ಎಂದು ಮನವಿ ಮಾಡಿದ್ದು ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಕೆಳಗೆ ನಿಲ್ಲಬಾರದು, ಸುರಕ್ಷಿತ ಸ್ಥಳದಲ್ಲಿ ತಲುಪಬೇಕು ಎಂದು ತಿಳಿಸಿದ್ದಾರೆ.
ಎಲ್ಲಾ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿ ಇರುಬೇಕು. ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಕರಣಿಕರು ತಮ್ಮ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸನ್ನದ್ಧರಿದ್ದು ಯಾವುದೇ ವಿಪತ್ತು ಸಂದರ್ಭದಲ್ಲಿ ಕೂಡಲೇ ಸ್ಪಂದಿಸಬೇಕು ಹಾಗೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ.
ಹಾಗೆಯೇ ಪ್ರಾಕೃತಿಕ ವಿಕೋಪ ಸಂಬಂಧಿಸಿ ಯಾವುದೇ ಸಮಸ್ಯೆಗಳಿದ್ದಲ್ಲಿ 1077 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಅಥವಾ 9483908000 ಗೆ ವಾಟ್ಸ್ಆಪ್ ಮಾಡಬಹುದಾಗಿದೆ.