ಮಂಗಳೂರು, ಆ. 08 (DaijiworldNews/MB) : ಬಜ್ಪೆಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯ ಸಂದರ್ಭದಲ್ಲಿ ವಿಮಾನ ಹಾರಾಟ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

"ನಮ್ಮ ವಿಮಾನ ನಿಲ್ದಾಣವು ಬೆಟ್ಟದ ಪಕ್ಕದಲ್ಲಿ ಟೇಬಲ್-ಟಾಪ್ ರನ್ವೇ ಯೊಂದಿಗೆ ನಿರ್ಮಿಸಲ್ಪಟ್ಟಿರುವುದರಿಂದ, ಭಾರೀ ಮಳೆಯ ಸಂದರ್ಭದಲ್ಲಿ ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಗುವುದಿಲ್ಲ. ಏಕೆಂದರೆ ಆ ಸಂದರ್ಭದಲ್ಲಿ ಲ್ಯಾಂಡ್ ಮಾಡಲು ತೊಂದರೆ ಉಂಟಾಗುತ್ತದೆ ಹಾಗೂ ವಿಮಾನ ರನ್ವೇಯಿಂದ ಜಾರುವ ಅಪಾಯವಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
ಶುಕ್ರವಾರ 184 ಮಂದಿ ಪ್ರಯಾಣಿಕರನ್ನು ಹೊತ್ತು ದುಬೈಯಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಕೋಝಿಕೋಡು ರನ್ವೇಯಿಂದ ಜಾರಿ ಪ್ರಪಾತಕ್ಕೆ ಉರುಳಿದ್ದು ದುರಂತದಲ್ಲಿ ಈವರೆಗೆ ಪೈಲಟ್ ಮತ್ತು ಸಹ ಪೈಲಟ್ ಸೇರಿದಂತೆ 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬಜ್ಪೆಯಲ್ಲಿ ಮೇ 22, 2010 ನಡೆದ ಭಾರೀ ವಿಮಾನ ದುರಂತದಿಂದಾಗಿ 158 ಮಂದಿ ಸಾವನ್ನಪ್ಪಿದ್ದರು.