ಕುಂದಾಪುರ, ಆ 08(DaijiworldNews/HR): ಬಸ್ರೂರು ಮೂರುಕೈಯಿಂದ ವಿನಾಯಕದ ತನಕ ಅವೈಜ್ಞಾನಿಕವಾದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ರಸ್ತೆ ಒಂದು ಮಳೆಗೆ ಹೊಳೆಯಾಗುತ್ತಿದ್ದು, ನಿರಂತರವಾಗಿ ಮಳೆ ಬಂದರೆ ಈ ರಸ್ತೆಯಲ್ಲಿ ವಾಹನ ಸಂಚರಿಸಲು ಸಾಧ್ಯವಾಗದ ಕಾರಣ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯವರು ಹೆದ್ದಾರಿ ಅವ್ಯಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕಾರು ತಡೆದು ಪರಿಸ್ಥಿತಿ ವಿವರಿಸಿದ ಘಟನೆ ನಡೆದಿದೆ.



ಶನಿವಾರ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಹೆದ್ದಾರಿ ಹೊಳೆಯಾಗಿ ಪರಿವರ್ತನೆಯಾಗಿದ್ದು, ಸಾಕಷ್ಟು ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿಯವರ ಬೇಜಾಬ್ದಾರಿಯಿಂದಾಗಿ ಈ ರೀತಿ ಪರಿಸ್ಥಿತಿ ಉಂಟಾಗಿದ್ದು, ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಕೆರೆಯಾಗಿ ಮಾರ್ಪಡುತ್ತಿದ್ದರೂ ಸಂಬಂಧಪಟ್ಟವರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡಬೇಕಾದ ಹೆದ್ದಾರಿ ಗುತ್ತಿಗೆ ಸಂಸ್ಥೆಯ ಹೊಣೆಗೇಡಿತನದಿಂದ ಈ ರೀತಿ ಸಮಸ್ಯೆ ಉಂಟಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ಆಕ್ರೋಶ ವ್ಯಕ್ತ ಪಡಿಸಿದರು.
ಸಮಸ್ಯೆಯನ್ನು ಆಲಿಸಿದ ಸಚಿವರು ಅಲ್ಲಿಂದಲೇ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ಈ ವಿಚಾರವನ್ನು ಹೆದ್ದಾರಿಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಸೂಕ್ತ ಗಮನ ಸಳೆಯುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪ್ರಮುಖರಾದ ಬಿ.ಕಿಶೋರ್ ಕುಮಾರ್, ರಾಜೇಶ ಕಾವೇರಿ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಶಶಿಧರ ಹೆಮ್ಮಾಡಿ ಮೊದಲಾದವರು ಹಾಜರಿದ್ದರು.