ಕಾಸರಗೋಡು, ಆ. 08 (DaijiworldNews/MB) : ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಗ್ಗುಪ್ರದೇಶ ಜಲಾವೃತಗೊಂಡಿದೆ. ನದಿಗಳು ಉಕ್ಕಿ ಹರಿಯುತ್ತಿದೆ. 514 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಆರು ಸಂತ್ರಸ್ತ ಶಿಬಿರಗಳನ್ನು ತೆರೆಯಲಾಗಿದೆ.

ಕೆಲ ದಿನಗಳ ಬಳಿಕ ಮಳೆ ತೀವ್ರಗೊಡಿದ್ದು , ಜಿಲ್ಲೆಯ ಎಲ್ಲಾ ನದಿ ಗಳು ಉಕ್ಕಿ ಹರಿದ ಪರಿಣಾಮ ಪ್ರವಾಹ ಸ್ಥಿತಿ ಉಂಟಾಗಿದೆ . ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ. ಚಂದ್ರಗಿರಿ, ತೇಜಸ್ವಿನಿ, ಶಿರಿಯ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿದ್ದು, ಹಲವು ಮನೆಗಳು ಅಪಾಯದಲ್ಲಿದೆ.
ತಳಂಗರೆ ಕೊಪ್ಪಳ, ತೆರುವತ್ ಹೊನ್ನಮೂಳೆ ದ್ವೀಪದಂತಾಗಿದ್ದು, ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ತಳಂಗರೆ ಜಿ ಯು ಪಿ ಶಾಲೆಯಲ್ಲಿ ಶಿಬಿರ ತೆರೆಯಲಾಗಿದೆ. ಕೊಪ್ಪಳ ದ 20, ಹೊನ್ನಮೂಲೆಯ 15 ರಷ್ಟು ಮನೆಗಳು ಪ್ರವಾಹಕ್ಕೆ ಸಿಲುಕಿದೆ. ನೂರಕ್ಕೂ ಅಧಿಕ ಮನೆಗಳು ಅಪಾಯದಲ್ಲಿದೆ.
ತೇಜಸ್ವಿನಿ ನದಿ ಉಕ್ಕಿ ಹರಿಯುತ್ತಿರುವುದರಿಂದ ನೀಲೇಶ್ವರ ನಗರಸಭೆಯ ಕಾರ್ಯಂಗೊಡು, ನಿಲಾಯಿ, ಪಾಲಯಿ ಹಾಗೂ ಇನ್ನಿತರ ಸ್ಥಳಗಳಿಗೆ ನೀರು ನುಗ್ಗಿದೆ. 15 ರಷ್ಟು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಭೀಮನಡಿ ಕೊನ್ನಕ್ಕೊಡ್ ನಲ್ಲಿ ಭೂಕುಸಿತ ಉಂಟಾಗಿದೆ ಮುತ್ತಾಡಿ ಕಾಲನಿಯ ಆರು ಮನೆಗಳನ್ನು ಸ್ಥಳಾಂತರಿಸಲಾಗಿದೆ. ಚೈತ್ರ ವಾಹಿನಿ ಹೊಳೆ ಉಕ್ಕಿ ಹರಿಯುತ್ತಿದೆ. ಉಪ್ಪಳ, ಕುಂಬಳೆ, ಕಾಸರಗೋಡು ತೀರದಲ್ಲಿ ಕಡಲ್ಕೊರೆತದ ಅಬ್ಬರ ತೀವ್ರಗೊಂಡಿದ್ದು, 25 ಕ್ಕೂ ಅಧಿಕ ಮನೆಗಳು ಅಪಾಯದಲ್ಲಿದೆ. ಉಪ್ಪಳ ಮುಸೋಡಿಯಲ್ಲಿ ಕಾಂಕ್ರೀ ಟ್ ರಸ್ತೆ ಕೊಚ್ಚಿ ಹೋಗಿದೆ. ಹಲವು ಮನೆಗಳು ಅಪಾಯದಲ್ಲಿದೆ. ಪೈವಳಿಕೆ ಬಾಯಾರು ಮುಳಿಗದ್ದೆಯಲ್ಲಿ ಭೂ ಕುಸಿತ ಉಂಟಾದ ಹಿನ್ನಲೆಯಲ್ಲಿ ಒಂಭತ್ತು ಕುಟುಂಬ ಗಳನ್ನು ತೆರವುಗೊಳಿಸಲಾಗಿದೆ. ಶನಿವಾರ ಮುಂಜಾನೆ ಘಟನೆ ನಡೆದಿದೆ. ಶಬ್ದ ಕೇಳಿ ಮನೆಯವರು ಹೊರಗೆ ಓಡಿದರಿಂದ ಅಪಾಯ ತಪ್ಪಿದೆ. ಉಪ್ಪಳ ಮುಸೋಡಿಯಲ್ಲಿ ಕಡಲ್ಕೊರೆತದ ಹಿನ್ನಲೆಯಲ್ಲಿ 8 ಕುಟುಂಬಗಳನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಪುತ್ತಿಗೆಅಂಗಡಿಮೊಗರು ಹೊಳೆಯು ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಜಿಲ್ಲೆಯ ಹಲವು ಕಡೆ ರಸ್ತೆ ಕೊಚ್ಚಿ ಹೋಗಿದ್ದು, ಸಂಚಾರಕ್ಕೂ ಅಡ್ಡಿಯಾಗಿದೆ. ಶಿರಿಯ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ಉಳುವಾರು, ಇಚ್ಲಂಗೋಡು, ಪಾಚನಿ ಮೊದಲಾದೆಡೆ ನೆರೆ ಹಾವಳಿ ಉಂಟಾಗಿದೆ. ಹೊಳೆ ಬದಿಯ ಬಯಲು ಗದ್ದೆ, ತೋಟಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಮಳೆ ಬಿರುಸುಗೊಳ್ಳುತ್ತಿರುವ ಹಿನ್ನಲೆಯಲ್ಲಿ ಭೂಕುಸಿತಕ್ಕೂ ಸಾಧ್ಯತೆ ಇದೆ ಇದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಆರಂಜ್ ಅಲರ್ಟ್ ಘೋಷಣೆ
ಜಿಲ್ಲೆಯಲ್ಲಿ ನಾಳೆ ( ಆದಿತ್ಯವಾರ ) ಆರಂಜ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಗೆ ಸಾಧ್ಯತೆ ಹಿನ್ನಲೆಯಲ್ಲಿ ನದಿ ಪರಿಸರ ಹಾಗೂ ತಗ್ಗು ಪ್ರದೇಶದ ಜನರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು ಮುನ್ನೆಚ್ಚರಿಕೆ ನೀಡಿದ್ದಾರೆ. ತಗ್ಗು ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ.