ಕಟಪಾಡಿ, ಆ. 08 (DaijiworldNews/MB) : ಪತ್ನಿಗೆ ಫೇಸ್ ಬುಕ್ ಮೂಲಕ ತ್ರಿವಳಿ ತಲಾಕ್ ನೀಡಿದ ಪತಿಯನ್ನು ಶಿರ್ವ ಠಾಣಾ ಪೋಲೀಸರು ಕಾನೂನಿನಡಿ ಬಂಧಿಸಿದ ಘಟನೆ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಯು ಶಿರ್ವ ಮಸೀದಿ ಬಳಿಯ ನಿವಾಸಿ ಶೇಕ್ ಮಹಮ್ಮದ್ ಸಲೀಂ (38)ನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ನ್ಯಾಯಾಲಯದ ಆದೇಶದ ಪ್ರಕಾರ ಜೈಲಿಗಟ್ಟಲಾಗಿದೆ.
ಪ್ರಕರಣದ ಹಿನ್ನೆಲೆ
2010ರಲ್ಲಿ ಸ್ವಪ್ನಾಜ್ ಎಂಬ ಯುವತಿಯೊಂದಿಗೆ ವಿವಾಹವಾಗಿದ್ದರು. ಸಲೀಂನು ತನ್ನ ಪತ್ನಿ ಮತ್ತು ಮಗಳೊಂದಿಗೆ ಸೌದಿ ಅರೇಬಿಯಾದ ದಮಾಮ್ನಲ್ಲಿ ವಾಸವಿದ್ದು, ಕಳೆದ ಅ. 3 ರಂದು ಪತ್ನಿ ಮಗಳನ್ನು ವಿದೇಶದಲ್ಲಿ ಬಿಟ್ಟು ಬೇರೊಬ್ಬ ಮಹಿಳೆಯೊಂದಿಗೆ ಮುಂಬಯಿಗೆ ಪರಾರಿಯಾಗಿದ್ದನು.
ಇದಾದ ಬಳಿಕ ತನ್ನ ಫೇಸ್ಬುಕ್ ಖಾತೆಯ ಮೂಲಕ ಪತ್ನಿಗೆ ತ್ರಿವಳಿ ತಲಾಕ್ ಹೇಳಿ ವಾಯ್ಸ್ ಮೆಸೇಜ್ ಕಳುಹಿಸಿ ಪತ್ನಿಯನ್ನು ತೊರೆದಿರುವ ಬಗ್ಗೆ ಸಂದೇಶ ರವಾನಿಸಿದ್ದಾನೆ. ಇದರಿಂದ ನೊಂದ ಪತ್ನಿ ವಿದೇಶದಿಂದಲೇ ಆನ್ ಲೈನ್ ಮೂಲಕ ಶಿರ್ವ ಠಾಣೆಗೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ಶಿರ್ವ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯು ಊರಿಗೆ ಬಂದಿದ್ದ ಸಂದರ್ಭದಲ್ಲಿ ಶಿರ್ವದಲ್ಲಿ ಬಂಧಿಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.