ಬೆಂಗಳೂರು, ಏ 24: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಸಾಧ್ಯತೆ ಇರಬಹುದೆಂಬ ಲೆಕ್ಕಚಾರದಲ್ಲಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಲೋಚಿಸುತ್ತಿದ್ದು, ಒಂದು ವೇಳೆ ಬಾದಾಮಿ ಕ್ಷೇತ್ರದಲ್ಲಿ ಕೂಡಾ ನಾಮಪತ್ರ ಸಲ್ಲಿಸಿದ್ರೆ ಅಲ್ಲೂ ಕೂಡಾ ಕಠಿಣ ಸ್ವರ್ಧೆ ಎದುರಿಸಬೇಕಾದ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬಂದೊದಗಿದೆ. ಮೊಳಕಾಲ್ಮೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಬಿಜೆಪಿ ಸಂಸದ ಶ್ರೀರಾಮುಲು, ಅವರನ್ನು ಬಾದಾಮಿ ಕ್ಷೇತ್ರದಿಂದಲೂ ಕೂಡಾ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಎಲ್ಲವೂ ಅಂದುಕೊಂಡಂತೆ ಅದರೆ, ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿರೋದ್ರಿಂದ ಈ ಎರಡು ಅಭ್ಯರ್ಥಿಗಳ ನಾಮಪತ್ರ ಇಂದು ಸಲ್ಲಿಸುವುದು ಖಚಿತ.
ಬಾದಾಮಿ ಕ್ಷೇತ್ರದಲ್ಲಿ ಪಕ್ಷದ ಲೆಕ್ಕಚಾರಕ್ಕಿಂತಲೂ ಜಾತಿ ಲೆಕ್ಕಾಚಾರದಲ್ಲಿ ಮಣೆ ಹಾಕುತ್ತಿದ್ದಾರೆ ಇಲ್ಲಿನ ಮತದಾರರು. ಹಾಗಾಗಿ ಇಲ್ಲಿ ನಿಲ್ಲುವ ಅಭ್ಯರ್ಥಿಗಿಂತಲೂ ಮುಖ್ಯವಾಗಿ ಜಾತಿ ಪ್ರಧಾನ ಪಾತ್ರ ವಹಿಸುತ್ತದೆ ಎನ್ನುವುದು ಬಿಜೆಪಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತಿಳಿದಿದೆ. ಸುಮಾರು 40ರಿಂದ 48 ಸಾವಿರದಷ್ಟು ಅಹಿಂದ ಮತಗಳ ಮೇಲೆ ಸಿಎಂ ಕಣ್ಣು ಹಾಕಿದ್ರೆ ಇದೇ ಅಹಿಂದ ಮತದಾರರಲ್ಲಿ ವಾಲ್ಮೀಕಿ ಸಮುದಾಯದ ಸುಮಾರು 35 ರಿಂದ 36 ಸಾವಿರ ಮತದಾರಿದ್ದಾರೆ. ಜತೆಗೆ ಸುಮಾರು 40 ಸಾವಿರ ಮಂದಿ ಲಿಂಗಾಯಿತ ಸಮುದಾಯದಯದ ಮತದಾರರಿದ್ದಾರೆ. ಹೀಗಾಗಿ ಶ್ರೀರಾಮುಲು ಸ್ಪರ್ಧೆಯೇ ಸೂಕ್ತ ಎನ್ನುವ ನಿಲುವಿಗೆ ಬಿಜೆಪಿ ಬಂದಿದೆ ಎನ್ನಲಾಗಿದೆ.