ಬಂಟ್ವಾಳ, ಆ. 09 (DaijiworldNews/MB) : ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿರುವ ಪರಿಣಾಮ ನೇತ್ರಾವತಿಯಲ್ಲಿ ನೀರಿನ ಪ್ರಮಾಣವು ಅಪಾಯದ ಮಟ್ಟವನ್ನು ಮೀರಿದ್ದು ತಾಲ್ಲೂಕಿನ ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗಿದೆ.









ತಾಲ್ಲೂಕಿನ ನೇತ್ರಾವತಿ ನದಿಯಲ್ಲಿ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು ಆಗಸ್ಟ್ 8 ರ ಶನಿವಾರ ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ನೀರಿನ ಮಟ್ಟವು ಒಂಬತ್ತು ಮೀಟರ್ ತಲುಪಿದೆ. ಇದರಿಂದಾಗಿ ಬಂಟ್ವಾಳ ಹಾಗೂ ಪಾಣೆಮಂಗಳೂರು ವ್ಯಾಪ್ತಿಯಲ್ಲಿ ಅನೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದು ಅನೇಕ ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ ನೀರಿನ ಮಟ್ಟ 9.3 ಮೀಟರ್ ತಲುಪಿದೆ. ಗುರುವಾರ ಬೆಳಿಗ್ಗೆ, ನದಿಯಲ್ಲಿ ನೀರಿನ ಮಟ್ಟ 7.6 ಮೀಟರ್ ಮತ್ತು ಶುಕ್ರವಾರ ಬೆಳಿಗ್ಗೆ 7.7 ಮೀಟರ್ ಆಗಿತ್ತು. ಬಳಿಕ ನೀರಿನ ಮಟ್ಟವು ಒಮ್ಮೆಲ್ಲೇ ಏರಿಕೆಯಾಗಿದೆ.
ಶಂಭೂರು ಅಣೆಕಟ್ಟು ಈಗಾಗಲೇ ತುಂಬಿದ್ದು ಹೆಚ್ಚುವರಿ ನೀರನ್ನು 14 ಗೇಟ್ಗಳ ಮೂಲಕ ಬಿಡಲಾಗುತ್ತಿದೆ. ತುಂಬೆ ಅಣೆಕಟ್ಟಿನ ನೀರಿನ ಮಟ್ಟ 7.8 ಮೀಟರ್ ತಲುಪಿದ್ದು ಹೆಚ್ಚುವರಿ ನೀರನ್ನು ಹೊರಬಿಡಲು ಅಣೆಕಟ್ಟಿನ ಎಲ್ಲಾ 30 ಗೇಟ್ಗಳನ್ನು ತೆರೆದಿಡಲಾಗಿದೆ.
ಗೂಡಿನಬಳಿ, ಬಂಟ್ವಾಳ ರಸ್ತೆ, ಬಡ್ಡಕಟ್ಟೆ, ಅಜಿಲಮೊಗರು, ಆಲ್ಲಡ್ಕ ಪಡ್ಪು ಮತ್ತು ಬೊಗೋಡಿ ಸೇರಿದಂತೆ ತಾಲ್ಲೂಕಿನ ನೇತ್ರಾವತಿ ನದಿಯ ದಡದ ಪಕ್ಕದಲ್ಲಿರುವ ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಆಲ್ಲಡ್ಕ ಕಿರು ಸೇತುವೆ, ಬಂಟ್ವಾಳ ಬಸ್ತಿಪಡ್ಪು ರಸ್ತೆ ಮತ್ತು ಗೂಡಿನಬಳಿ ರಸ್ತೆಗಳು ಜಲಾವೃತವಾಗಿದೆ. ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಅನೇಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ತಾಲ್ಲೂಕು ಆಡಳಿತವು ಪರಿಹಾರ ಕೇಂದ್ರಗಳನ್ನು ತೆರೆದಿದ್ದರೂ, ಯಾವುದೇ ಕುಟುಂಬಗಳು ಈ ಕೇಂದ್ರಗಳಲ್ಲಿ ವಾಸಿಸಲು ಮುಂದಾಗದೆ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಹಾಗಯೇ ಈವರೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ತಾಲ್ಲೂಕು ಆಡಳಿತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಣೆಮಂಗಳೂರು, ನಂದಾವರ, ಬಂಟ್ವಾಳ ಕೆಳಗಿನ ಪೇಟೆ, ತಲಪಾಡಿ, ಪೊನ್ನೋಡಿ, ತುಂಬೆ, ವಲವೂರು, ಪುದು, ನಾವೂರು ಹಾಗ ಅಜಿಲಮೊಗರು ನೇತ್ರಾವತಿ ನದಿ ತೀರ ಪ್ರದೇಶಗಳಲ್ಲಿ ನೀರು ತುಂಬಿದೆ. ಐತಿಹಾಸಿಕ ಪ್ರಸಿದ್ಧ ಅಜಿಲಮೊಗರು ಜುಮಾ ಮಸೀದಿ ಜಲಾವೃತವಾಗಿದೆ. ಮಸೀದಿಯ ಮುಂಭಾಗದಲ್ಲಿರುವ ಸಭಾಂಗಣಕ್ಕೆ ನೀರು ನುಗ್ಗಿದೆ. ತಾಲ್ಲೂಕಿನ ಕೆಲವು ಭಾಗಗಳಲ್ಲಿ ಹೊಲಗಳು ಜಲಾವೃತವಾಗಿದ್ದು ಬೆಳೆ ಹಾನಿಯಾಗಿದೆ. ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆ ಚರ್ಚ್ನ ಅಂಗನವಾಡಿ ಕೇಂದ್ರದ ಕಾಂಪೌಂಡ್ ಗೋಡೆ ಕುಸಿದಿದೆ. ಹಾಗೆಯೇ ಛಾವಣಿಗೂ ಹಾನಿ ಉಂಟಾಗಿದೆ.
ಬಿ.ಸಿ. ರೋಡ್ - ಧರ್ಮಸ್ಥಳ ರಸ್ತೆಯ ಹಂಚಿಕಟ್ಟೆಯಲ್ಲಿ ಹೆದ್ದಾರಿಗೆ ಅಡ್ಡಲಾಗಿ ಮರ ಬಿದ್ದು ಸ್ವಲ್ಪ ಸಮಯದವರೆಗೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.