ಮಂಗಳೂರು, ಆ. 09 (DaijiworldNews/MB) : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಳೆ ವೇಳೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದು ಏತನ್ಮಧ್ಯೆ ''ಮಳೆಗಾಲದಲ್ಲಿ ವಿಮಾನ ನಿಲ್ದಾಣವನ್ನು ಮುಚ್ಚುವ ಪ್ರಸ್ತಾಪವಿಲ್ಲ'' ಎಂದು ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್ಒ) ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಮಾಧ್ಯಮದಲ್ಲಿ ಪ್ರಕಟಿಸಲಾಗಿರುವ ವರದಿ ನಿಜವಲ್ಲ ಎಂದು ಕೂಡಾ ಹೇಳಿದ್ದಾರೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಂದಿನಂತೆ ವಿಮಾನ ಕಾರ್ಯಾಚರಣೆ ನಡೆಯಲಿದೆ. ದುಬೈಗೆ 165 ಪ್ರಯಾಣಿಕರನ್ನು ಹೊತ್ತ ವಿಮಾನ ನಿಗದಿತ ಸಮಯ ಆಗಸ್ಟ್ 9 ರ ಭಾನುವಾರ ಮಧ್ಯಾಹ್ನ 12.40 ಕ್ಕೆ ಹೊರಡಲಿದೆ ಎಂದು ಪಿಆರ್ಒ ತಿಳಿಸಿದ್ದಾರೆ.
"ವಂದೇ ಭಾರತ್ ಮಿಷನ್ ಮತ್ತು ಚಾರ್ಟರ್ಡ್ ವಿಮಾನಗಳು ನಿಗದಿಯಂತೆ ಹಾರಾಟ ನಡೆಸುತ್ತಿವೆ. ದುಬೈ ಮತ್ತು ದಮಾನ್ನಿಂದ ಇಂಡಿಗೊ ವಿಮಾನಗಳು ಸಹ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಸೋಮವಾರ ಮಸ್ಕತ್ನಿಂದ ನಿಗದಿಯಾಗಿದ್ದ ವಿಮಾನವನ್ನು ರದ್ದುಪಡಿಸಲಾಗಿದೆ. ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ನಿಂದ ವಿಮಾನಗಳು ಇಲ್ಲಿಗೆ ಆಗಮಿಸುತ್ತಿದೆ ಹಾಗೂ ಅಲ್ಲಿಗೆ ಹಾರಾಟ ನಡೆಸುತ್ತಿದೆ. ಶನಿವಾರ ಹವಮಾನ ತೊಂದರೆಯಿಂದಾಗಿ ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ ವಿಮಾನವು ಲ್ಯಾಂಡ್ ಆಗಲು ಸಾಧ್ಯವಾಗದೆ ಬೆಂಗಳೂರಿಗೆ ಮರಳಿದೆ " ಎಂದು ಅವರು ಹೇಳಿದ್ದಾರೆ.
ಆಗಸ್ಟ್ 8 ರ ಶನಿವಾರ ಸುದ್ದಿ ಸಂಸ್ಥೆಯೊಂದು ವಿಮಾನ ನಿಲ್ದಾಣದ ನಿರ್ದೇಶಕ ವಿ ವಿ ರಾವ್ ಅವರ ಹೇಳಿಕೆಯನ್ನು ಉಲ್ಲೇಖಿಸಿ "ಭಾರೀ ಮಳೆಯ ಸಮಯದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರಕ್ಕೆ ಅನುಮತಿಸಲಾಗುವುದಿಲ್ಲ, ಏಕೆಂದರೆ ಹವಾಮಾನದ ಕಾರಣದಿಂದಾಗಿ ಲ್ಯಾಂಡ್ ಆಗಲು ಕಷ್ಟವಾಗುತ್ತದೆ. ಹಾಗೆಯೇ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ರನ್ವೇಯಿಂದ ಜಾರುವ ಅಪಾಯವಿದೆ ಎಂದು ಹೇಳಿದ್ದರು.
ಶುಕ್ರವಾರ ಶುಕ್ರವಾರ 184 ಮಂದಿ ಪ್ರಯಾಣಿಕರನ್ನು ಹೊತ್ತು ದುಬೈಯಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಕೋಝಿಕೋಡು ರನ್ವೇಯಿಂದ ಜಾರಿ ಪ್ರಪಾತಕ್ಕೆ ಉರುಳಿದ್ದು ದುರಂತದಲ್ಲಿ ಈವರೆಗೆ ಪೈಲಟ್ ಮತ್ತು ಸಹ ಪೈಲಟ್ ಸೇರಿದಂತೆ 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.