ಮೈಸೂರು, ಏ 24 : ವರುಣಾ ಕ್ಷೇತ್ರದಲ್ಲಿ ಕೊನೆಗೂ ವಿಜಯೇಂದ್ರ ಅವರ ಸ್ಪರ್ಧೆ ಇಲ್ಲ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮೊದಲು 'ನನ್ನಿಂದ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ' ಎಂದು ಕಾರ್ಯಕರ್ತರಲ್ಲಿ ಕ್ಷಮೆ ಯಾಚಿದ ಅವರು, ಕೆಲವು ವಿಶೇಷ ಕಾರಣಗಳಿಂದಾಗಿ ವಿಜಯೇಂದ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ ದೇಕರ್ ಮತ್ತು ಮುರಳೀಧರ ರಾವ್ ಅವರೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ಬಳಿಕ ಅಂತಿಮ ನಿರ್ಧಾರಕ್ಕೆ ಬಂದು , ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ.ಎಸ್.ವೈ, ತಮ್ಮ ಪುತ್ರ ವಿಜಯೇಂದ್ರ ಚುನಾವಣಾ ಕಣಕ್ಕೆ ಇಳಿಯುತ್ತಿಲ್ಲ ಎಂದು ಖಚಿತಪಡಿಸಿದರು. ಈ ವಿಚಾರವಾಗಿ ಮೈಸೂರು ಮತ್ತು ಚಾಮರಾಜನಗರದ ಎಲ್ಲಾ ಬಿಜೆಪಿ ಅಭ್ಯರ್ಥಿಗಳೊಂದಿಗೆ ಸಮಲೋಚನೆ ನಡೆಸಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.
ಸ್ಪರ್ಧೆ ಗೆ ಇಳಿಯದ ವಿಜಯೇಂದ್ರ ಅವರು ಎಲ್ಲಾ ಕ್ಷೇತ್ರಗಳಲ್ಲಿ 20 ದಿನಗಳ ಕಾಲ ಪ್ರವಾಸ ಮಾಡಿ ಪ್ರಚಾರ ನಡೆಸಲಿದ್ದಾರೆ. ವರುಣಾದಲ್ಲಿ ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಅವರ ಪರ ಶಾಂತಿಯಿಂದ ಕೆಲಸ ಮಾಡಬೇಕು. ಈ ವಿಚಾರವಾಗಿಯಾವೊಬ್ಬ ಕಾರ್ಯಕರ್ತರು ತಪ್ಪು ಗ್ರಹಿಕೆ ಮಾಡಬಾರದು ಎಂದು ಇದೇ ವೇಳೆ ವಿನಂತಿಸಿದರು.