ಮಂಗಳೂರು, ಆ 09 (DaijiworldNews/PY): ಕೇರಳದ ಕೋಝಿಕೋಡ್ನಲ್ಲಿ ಶುಕ್ರವಾರ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟ ಪೈಲಟ್ ಕ್ಯಾಪ್ಟನ್ ದೀಪಕ್ ವಸಂತ್ ಸಾಥೆ 2015-16ರ ಅವಧಿಯಲ್ಲಿ ಮಂಗಳೂರಿನ ಏರ್ ಇಂಡಿಯಾದ ಸಂಸ್ಥೆಯಲ್ಲಿ ಪೈಲಟ್ ಆಗಿ 15 ತಿಂಗಳು ಸೇವೆ ಸಲ್ಲಿಸಿದ್ದರು.

ಕ್ಯಾಪ್ಟನ್ ದೀಪಕ್ ಅವರು ಆ ಅವಧಿಯಲ್ಲಿ ಕದ್ರಿ ಪಾರ್ಕ್ ಬಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಅವರು ವಾಸವಾಗಿದ್ದ ಸ್ಥಳದಲ್ಲಿ ಅವರಿಗೆ ಹಲವಾರು ಸ್ನೇಹಿತರಿದ್ದರು. ಕ್ಯಾಪ್ಟನ್ ದೀಪಕ್ ಅವರು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ನ ನಿವಾಸಿಗಳು, ಅನುಭವಿ ಪೈಲಟ್ನ ಸರಳತೆ ಹಾಗೂ ಸ್ನೇಹಪರ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಆ ಅಪಾರ್ಟ್ಮೆಂಟ್ನಲ್ಲಿದ್ದ ಎಲ್ಲರೊಂದಿಗೂ ಕೂಡಾ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಿದ್ದರು ಎಂದು ಅಪಾರ್ಟ್ಮೆಂಟ್ನ ನಿವಾಸಿಗಳು ಹೇಳಿದ್ದಾರೆ.
ಕ್ಯಾಪ್ಟನ್ ದೀಪಕ್ ಸಾಥೆ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿ ಲ್ಯಾನ್ಸೆಲಾಟ್ ಸಲ್ಡಾನ್ಹಾ, ಸಾಥೆ ಒಬ್ಬ ಸಮರ್ಥ ಮತ್ತು ಅನುಭವಿ ಪೈಲಟ್. ಅವರು ಬಹಳ ಶಿಸ್ತುಬದ್ಧ ವ್ಯಕ್ತಿ ಮತ್ತು ಭಾರತೀಯ ವಾಯುಸೇನೆಯಲ್ಲಿಯೂ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.
1988-90ರ ಅವಧಿಯಲ್ಲಿ ಸಾಥೆ ಅವರೊಂದಿಗೆ ಕೆಲಸ ಮಾಡಿದ್ದನ್ನು ಐಎಎಫ್ನ ನಿವೃತ್ತ ವಿಂಗ್ ಕಮಾಂಡರ್ ಜಿ ಬಿ ಅತ್ರಿ ನೆನಪಿಸಿಕೊಂಡಿದ್ದು, ಎಂಜಿನ್ ಅನ್ನು ಆಫ್ ಮಾಡುವ ಸಾಥೆ ಅವರ ಕೊನೆಯ ಕ್ಷಣದ ನಿರ್ಧಾರವು ವಿಮಾನವನ್ನು ಬೆಂಕಿ ಹಿಡಿಯದಂತೆ ತಡೆದಿದ್ದು ಹಾಗೂ 180 ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ ಎಂದು ಅತ್ರಿ ಹೇಳಿದರು.
ಪೈಲಟ್ ಕ್ಯಾಪ್ಟನ್ ಸಾಥೆ ಕೊನೆಯ ಕ್ಷಣದ ನಿರ್ಧಾರವನ್ನು ತೆಗೆದುಕೊಳ್ಳದೇ ಇದ್ದಿದ್ದರೆ, ನೂರಾರು ಪ್ರಯಾಣಿಕರು ಕ್ಯಾಲಿಕಟ್ ವಾಯು ಅಪಘಾತದಲ್ಲಿ ಜೀವಂತವಾಗಿ ಸುಟ್ಟು ಹೋಗುತ್ತಿದ್ದರು. ಆದರೆ ಅವರ ಅನುಭವವು ಉತ್ತಮವಾದ ತೀರ್ಮಾನವನ್ನು ತೆಗೆದುಕೊಳ್ಳುವಂತೆ ಮಾಡಿತು. ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ ಎಂದು ತಿಳಿದಾಗ, ಅವರು ವಿಮಾನದ ಎಂಜಿನ್ಗಳನ್ನು ಆಫ್ ಮಾಡಿದ್ದು, ಆ ಮೂಲಕ ವಿಮಾನಕ್ಕೆ ಬೆಂಕಿ ಹಿಡಿಯದಂತೆ ತಡೆದಿದ್ದಾರೆ.
ಕ್ಯಾಪ್ಟನ್ ಸಾಥೆ ಅವರ ಈ ನಿರ್ಧಾರವವು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ, ಆದರೆ ಅವರ ಧೈರ್ಯವು ದೇಶಾದ್ಯಂತ ಸಾಮಾಜಿಕ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಶಂಸೆಯನ್ನು ಗಳಿಸಿದೆ.
ಕ್ಯಾಪ್ಟನ್ ಸಾಥೆ ಅವರ ಸಂಬಂಧಿ ದೀಪಕ್ ನಿಲೇಶ್ ಸಾಥೆ ಅವರು ಭಾವನಾತ್ಮಕವಾಗಿ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಸಾಥೆ ಅವರು ನನ್ನನ್ನು ಕೇವಲ ಒಂದು ವಾರದ ಮೊದಲು ಕರೆದಿದ್ದರು. ಅವರು ಯಾವಾಗಲೂ ಖುಷಿಯಾಗಿದ್ದರು. ನಾನು ವಂದೇ ಭಾರತ್' ಮಿಷನ್ ಬಗ್ಗೆ ಅವರನ್ನು ಕೇಳಿದಾಗ, ತಮ್ಮ ದೇಶವಾಸಿಗಳನ್ನು ಅರಬ್ ದೇಶದಿಂದ ವಾಪಾಸ್ಸು ಕರೆತರುತ್ತಿರುವುದು ಹೆಮ್ಮೆ ವಿಚಾರ ಎಂದರು. ಆ ದೇಶ ಪ್ರಯಾಣಿಕರ ಪ್ರವೇಶಕ್ಕೆ ಅನುಮತಿ ನೀಡದ ಕಾರಣ ನೀವು ಖಾಲಿ ವಿಮಾನ ಹಾರಾಟ ನಡೆಸುತ್ತೀರಾ? ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಇಲ್ಲ, ನಾವು ವಿಮಾನಗಳನ್ನು ಖಾಲಿಯಾಗಿ ಹಾರಾಟ ನಡೆಸುವುದಿಲ್ಲ. ನಾವು ಹಣ್ಣು-ತರಕಾರಿ ಹಾಗೂ ಔಷಧಿಗಳನ್ನು ಕೊಂಡೊಯ್ಯುತ್ತೇವೆ. ಎಂದಿದ್ದರು. ಇದು ನಮ್ಮಿಬ್ಬರ ನಡುವಿನ ಕೊನೆ ಸಂಭಾಷಣೆಯಾಗಿತ್ತು ಎಂದು ತಿಳಿಸಿದ್ದಾರೆ.