ಕಾಸರಗೋಡು, ಆ. 09 (DaijiworldNews/MB) : ಶನಿವಾರ ಸಂಜೆಯಿಂದ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಮನೆ ಸಮೀಪದ ತೋಡಿನಲ್ಲಿ ಇಂದು ಪತ್ತೆಯಾಗಿದೆ.

ಕಳ್ಳಾರ್ ಪೂಡಂಕಲ್ಲು ಕರಿಚ್ಚೇರಿಯ ನಾರಾಯಣರವರ ಪುತ್ರಿ ಶ್ರೀಲಕ್ಷ್ಮಿ ( 26) ಮೃತಪಟ್ಟವರು.
ಮನೆಯಿಂದ ಅಲ್ಪ ದೂರದ ತೋಡಿನ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ. ಶನಿವಾರ ಸಂಜೆ ಐದು ಗಂಟೆಯಿಂದ ಶ್ರೀಲಕ್ಷ್ಮಿ ನಾಪತ್ತೆಯಾಗಿದ್ದರು. ಸಂಜೆ 4.30 ರ ತನಕ ಮನೆಯವರ ಜೊತೆಗಿದ್ದರು. ಈ ಸಂದರ್ಭದಲ್ಲಿ ಈಕೆಯ ಮೊಬೈಲ್ ಗೆ ಕರೆ ಬಂದಿತ್ತು. ಬಳಿಕ ನಾಪತ್ತೆಯಾಗಿದ್ದರು ಯುವತಿ ನಾಪತ್ತೆಯಾದ ಬಗ್ಗೆ ರಾಜಾಪುರ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು, ಕುಟುಂಬಸ್ಥರು, ನಾಗರಿಕರು ಶೋಧ ನಡೆಸಿದ್ದರು.
ಈಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಈ ನಡುವೆ ಇಂದು ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ನಾಗರಿಕರು ನಡೆಸಿದ ಶೋಧದಿಂದ ಮನೆಯಿಂದ ಅರ್ಧ ಕಿ. ಮೀ ದೂರದಲ್ಲಿ ತೋಡಿನಲ್ಲಿ ಮೃತದೇಹ ಪತ್ತೆಯಾಗಿದೆ.
ಗುಜರಾತ್ ನಲ್ಲಿ ಎಂ ಎಸ್ ಸಿ ಅಗ್ರಿಕಲ್ಚರಲ್ ಕೋರ್ಸ್ ನಡೆಸುತ್ತಿರುವ ಶ್ರೀಲಕ್ಷ್ಮಿ ಲಾಕ್ ಡೌನ್ ಸಂದರ್ಭದಲ್ಲಿ ಊರಿಗೆ ಬಂದಿದ್ದರು. ಶಿಕ್ಷಣ ಪೂರ್ಣಗೊಳ್ಳದೆ ಬಗ್ಗೆ ಮಾನಸಿಕ ಒತ್ತಡ ಇತ್ತೆನ್ನಲಾಗಿದೆ.
ಮೃತದೇಹವನ್ನು ಮಹಜರು ನಡೆಸಿದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.