ಕಾಸರಗೋಡು, ಆ. 09, (DaijiworldNews/SM): ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಯಾವುದೇ ಪರಿಸ್ಥಿಯನ್ನು ಎದುರಿಸಲು ಜಿಲ್ಲೆ ಪೂರ್ಣ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.

ತಗ್ಗುಪ್ರದೇಶದ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಎಲ್ಲಾ ಇಲಾಖೆಗಳು ಕಾರ್ಯಪ್ರವೃತ್ತವಾಗಿವೆ. ಅಗತ್ಯ ಇರುವ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕೋವಿಡ್ ಮಾನದಂಡ ಪಾಲಿಸಿ ಕೇಂದ್ರಗಳು ಕಾರ್ಯಾಚರಿಸಲಿದ್ದು, ಈ ಬಗ್ಗೆ ಗಮನಹರಿಸಲಾಗಿದೆ. ಎಲ್ಲಾ ಸೌಲಭ್ಯಗಳನ್ನು ಕೇಂದ್ರಗಳಲ್ಲಿ ಏರ್ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬುಧವಾರ ತನಕ ಜಿಲ್ಲೆಯಲ್ಲಿ ಭಾರೀ ಮಳೆಯ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಲಭಿಸಿದೆ. ಇದರಿಂದ ಸಾಕಷ್ಟು ಮುನ್ನೆಚ್ಚರಿಗಳನ್ನು ವಹಿಸಬೇಕಿದೆ. ಕಂದಾಯ, ಪೊಲೀಸ್, ಪಂಚಾಯತ್ ಅಧಿಕಾರಿಗಳು ಗಮನ ನೀಡುವಂತೆ ತಿಳಿಸಲಾಗಿದೆ. ಅನಗತ್ಯ ಸಂಚಾರವನ್ನು ಕೈಬಿಡಬೇಕು. ಮರ ಬೀಳುವ, ಭೂಕುಸಿತದಂತಹ ಘಟನೆಗಳು ನಡೆಯುತ್ತಿವೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಕಂಟ್ರೋಲ್ ರೂಂ ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು ಕಾಸರಗೋಡು ಜಿಲ್ಲೆಯಲ್ಲಿ ಆದಿತ್ಯವಾರವೂ ಮಳೆಯ ಅಬ್ಬರ ಹೆಚ್ಚಾಗಿತ್ತು. ಕಾಸರಗೋಡು ತೇಜಸ್ವಿನಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ವೆಳ್ಳರಿಕುಂಡ್ ತಾಲೂಕು ವ್ಯಾಪ್ತಿಯಲ್ಲಿ ನೆರೆ ಹಾವಳಿ ತೀವ್ರವಾಗಿದೆ. ಇಲ್ಲಿನ 34 ಕುಟುಂಬಗಳನ್ನೂ ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲಾಗಿದೆ. ಕಿನಾನೂರು ಗ್ರಾಮದ 18 ಕುಟುಂಬಗಳ ತೆರವುಗೊಳಿಸಲಾಗಿದೆ. ಕರಿಂದಳಂ ಗ್ರಾಮದ 4 ಕುಟುಂಬಗಳ ಸದಸ್ಯರನ್ನು ಸ್ಥಳಾಂತರಿಸಲಾಗಿದೆ.