ಕಾಸರಗೋಡು, ಆ. 09, (DaijiworldNews/SM): ಜಿಲ್ಲೆಯಲ್ಲಿ ಮಳೆಯ ಅಬ್ಬರ ಆದಿತ್ಯವಾರವೂ ತೀವ್ರಗೊಂಡಿದ್ದು, ಎರಡು ದಿನಗಳ ಅವಧಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 935 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಆರು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 10 ಮನೆಗಳು ಪೂರ್ಣವಾಗಿ, 107 ಮನೆಗಳು ಭಾಗಶ: ವಾಗಿ ಕುಸಿದಿದೆ. ಅಪಾರ ಕೃಷಿ ನಾಶ ಉಂಟಾಗಿದೆ.


ಕಳ್ಳಾರ್ ನಲ್ಲಿ ತೋಡಿಗೆ ಬಿದ್ದು ಪೂಡಂಕಲ್ಲು ಕರಿಚ್ಚೇರಿಯ ಶ್ರೀಲಕ್ಷ್ಮಿ(26) ಮತ್ತು ವೆಳ್ಳರಿಕುಂಡುವಿನಲ್ಲಿ ವೃದ್ಧೆ ಕೊನ್ನಕ್ಕಾಡ್ ಪಳ್ಳಿಯ ಕವಿಲತ್ತುಮ್ಮ(80) ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತೇಜಸ್ವಿನಿ, ಚಂದ್ರಗಿರಿ, ಚೈತ್ರವಾಹಿನಿ ನದಿಗಳು ಅಪಾಯಮಟ್ಟ ಮೀರುತ್ತಿದ್ದು, ಜಿಲ್ಲೆಯ 11 ನದಿಗಳು ಉಕ್ಕಿ ಹರಿಯುತ್ತಿವೆ.
ಜಿಲ್ಲೆಯಲ್ಲಿ 935 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ 76 ಕುಟುಂಬಗಳನ್ನು ಕಾಳಜಿ ಕೇಂದ್ರ ಹಾಗೂ 859 ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. 935 ಕುಟುಂಬಗಳ 3, 420 ಮಂದಿ ಇದ್ದಾರೆ.