ಉಳ್ಳಾಲ, ಆ. 09, (DaijiworldNews/SM): ಇಲ್ಲಿನ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತದಿಂದ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. ಪರಿಣಾಮ ಎರಡು ಭಾಗದ ಸಂಪರ್ಕ ಕಡಿತಗೊಂಡಿದೆ. ಇದಕ್ಕೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣವೆಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ಕಡಲ್ಕೊರೆತದಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾಗೂ ಪ್ರಾಣಿ-ಪಕ್ಷಿಗಳ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೇವು. ಎರಡು ತಿಂಗಳಿಂದ ಅಧಿಕಾರಿಗಳ ಗಮನಕ್ಕೆ ಸಮಸ್ಯೆಗಳ ಕುರಿತು ಗಮನಕ್ಕೆ ತರಲಾಗಿತ್ತು. ಆದರೆ ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ಸರಕಾರದ ನಿರ್ಲಕ್ಷ್ಯದಿಂದಾಗಿ ಉಚ್ಚಿಲ ಸಂಪರ್ಕ ರಸ್ತೆ ಕಡಿತಗೊಂಡಿದ್ದು ಇದರಿಂದ ಸ್ಥಳೀಯ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಈ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದೆ. ಅತೀ ಶೀಘ್ರದಲ್ಲಿ ಪರಿಹಾರದ ಕುರಿತು ಉನ್ನತ ಮಟ್ಟದ ಸಭೆ ಕರೆಯುವುದು ಆಡಳಿತದ ಜವಾಬ್ದಾರಿಯಾಗಿದ್ದು ಸ್ಥಳೀಯ ಶಾಸಕನಾಗಿ ಸಭೆ ಏರ್ಪಡಿಸುವಾಗ ನನ್ನನ್ನು ಕರೆಯಬೇಕು. ಕಳೆದ ಎರಡು ತಿಂಗಳಿನಿಂದ ಯಾವುದೇ ಸಭೆಗೆ ನನ್ನನ್ನು ಕರೆಯದೆ ನಿರ್ಲಕ್ಷ್ಯ ಮಾಡಲಾಗಿದೆ. ಇನ್ನಾದರೂ ಎಲ್ಲಾ ಚರ್ಚೆ ಹಾಗೂ ಸಭೆಗಳಲ್ಲಿ ನನ್ನನ್ನು ಕರೆಯಲಿ ಎಂದು ಶಾಸಕ ಯು.ಟಿ. ಖಾದರ್ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ.