ಕಾಸರಗೋಡು, ಆ. 09, (DaijiworldNews/SM): ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿನಿತ್ಯ ತೆರಳುವವರಿಗೆ ಪ್ರಯಾಣಕ್ಕೆ ಅನುಮತಿ ನೀಡಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಖಾಯಂ ಆಗಿ ತೆರಳುವವರಿಗೆ ಅನುಕೂಲವಾಗುವಂತೆ ನೋಂದಣಿಗೆ ತಲಪಾಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಕನ್ನಡಕ್ಕೆ ದಿನಂಪ್ರತಿ ತೆರಳುವವರಿಗೆ ಹಾಗೂ ದಕ್ಷಿಣ ಕನ್ನಡದಿಂದ ಕಾಸರಗೋಡಿಗೆ ಮರಳುವವರಿಗೆ ತಲಪಾಡಿಯಲ್ಲಿ ನೋಂದಣಿಯನ್ನು ಡಾಟಾ ಎಂಟ್ರಿ ಟೀಮ್ ನಡೆಸಲಿದೆ .
ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ಡೈಲಿ ಪಾಸ್ ವಿಭಾಗದಲ್ಲಿ ನೋಂದಣಿ ಮಾಡಲಿದೆ. ಇದರ ಜೊತೆ ಆಂಟಿಜನ್ ಟೆಸ್ಟ್ ನೆಗಟಿವ್ ಪ್ರಮಾಣ ಪತ್ರ ಸಲ್ಲಿಸಬೇಕು. ಈ ಪ್ರಮಾಣ ಪತ್ರವನ್ನು ತಲಪಾಡಿ ಗಡಿಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದಲ್ಲಿ ನಡೆಯುವ ಆಂಟಿಜನ್ ತಪಾಸಣೆಯ ಬಳಿಕ ನೀಡಲಾಗುವುದು. ಇದಲ್ಲದೆ ಉದ್ಯೋಗಕ್ಕೆ ತೆರಳುವವರು ಸಂಸ್ಥೆಯ ಮಾಲಕನ ಹೆಸರು, ಕಚೇರಿ ವಿಳಾಸ ಹಾಗೂ ಸಂಸ್ಥೆಯ ಗುರುತು ಚೀಟಿ ಯನ್ನು ಕಡ್ಡಾಯವಾಗಿ ತೋರಿಸಬೇಕು. ಅರೋಗ್ಯ ಇಲಾಖೆ ಕೆಲವೇ ನಿಮಿಷದಲ್ಲಿ ತಪಾಸಣೆ ಪ್ರಮಾಣ ಪತ್ರ ನೀಡಲಿದೆ.

ಡಾಟಾ ಎಂಟ್ರಿ ಟೀಮ್ ಆ ವ್ಯಕ್ತಿಯ ಮಾಹಿತಿ, ದಾಖಲೆ ಹಾಗೂ ಆಂಟಿಜನ್ ಟೆಸ್ಟ್ ವರದಿಯನ್ನು ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಲಿದ್ದು, ಕೆಲವೇ ಕ್ಷಣದಲ್ಲಿ ದೈನಂದಿನ ಪಾಸ್ ನೀಡಲಿದೆ. ಪ್ರತಿ ಏಳು ದಿನಗಳಿಗೊಮ್ಮೆ ಪ್ರಯಾಣಿಕ ಈ ಮಾರ್ಗಸೂಚಿಯನ್ನು ಪಾಲಿಸಬೇಕಿದೆ. ಇನ್ನೊಂದು ಆದೇಶ ನೀಡುವ ತನಕ ಇದು ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೊರೋನ ಹಿನ್ನಲೆಯಲ್ಲಿ ಉಭಯ ಜಿಲ್ಲೆಗಳ ಸಂಪರ್ಕ ಬಂದ್ ಮಾಡಲಾಗಿತ್ತು. ಈ ಹಿಂದೆ ಪಾಸ್ ಮೂಲಕ ಪ್ರಯಾಣಕ್ಕೆ ಅನುಮತಿ ನೀಡಿ ದ್ದರೂ ಸೋಂಕು ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಜಿಲ್ಲಾಡಳಿತ ಮತ್ತೆ ಪಾಸ್ ನೀಡಲು ಮುಂದಾಗಿದ್ದು, ಸಾವಿರಾರು ಮಂದಿಗೆ ಪ್ರಯೋಜನ ಲಭಿಸಲಿದೆ.