ಬೆಂಗಳೂರು, ಏ 24 : ನನ್ನ ಆರೋಗ್ಯ ಚೆನ್ನಾಗಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಇನ್ಮುಂದೆ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇತ್ತೀಚೆಗೆ ನನಗೆ ಓಡಾಡಲು ಆಗ್ತಿಲ್ಲ ಎಂದು ಹೇಳಿದ ಶಾಸಕ , ನಟ ಅಂಬರೀಶ್ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಂಡ್ಯ ಕ್ಷೇತ್ರದ ಕಣದಿಂದ ಹಿಂದೆ ಸರಿದ ಬಳಿಕ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನನಗೆ 66 ವರ್ಷ ವಯಸ್ಸಾಗಿದ್ದು, ಇನ್ನು ರಾಜಕೀಯದಲ್ಲಿ ಮುಂದುವರಿಯುವುದು ಸರಿ ಅಲ್ಲ, ಇದಕ್ಕೆ ತಕ್ಕದಾಗಿ ನನ್ನ ಆರೋಗ್ಯವೂ ಸರಿ ಇಲ್ಲ. ಹಾಗಾಗಿ ಪ್ರಚಾರಕ್ಕೆ ಹೋಗುವುದಿಲ್ಲ. ಮಂಡ್ಯದಲ್ಲಿ ನಾನಿಲ್ಲದಿದ್ದರೆ ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಾನೆ ಎಂದರು .
ಕಾಂಗ್ರೆಸ್ ಹೈಕಮಾಂಡ್ ಗೆ ಯಾವ ಹೆಸರನ್ನೂ ಸೂಚಿಸಿಲ್ಲ ನಾನು. ಒಂದು ವೇಳೆ ಹೆಸರು ಸೂಚಿಸಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗುತ್ತದೆ ಎಂದರು. ರಮ್ಯಾಗೂ ಟಿಕೆಟ್ ಕೊಡಬಹುದಿತ್ತು. ನಾನು ಎಲ್ಲವನ್ನೂ ಯೋಚಿಸಿಯೇ ನಿರ್ಧಾರ ಕೈಗೊಂಡಿದ್ದೇನೆ ಎಂದರು.