ಮಂಗಳೂರು, ಆ 10 (DaijiworldNews/PY): ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆಸುರಿಯುತ್ತಿದ್ದು, ಆ.9ರ ಭಾನುವಾರವೂ ಮಳೆ ಮುಂದುವರೆದಿದೆ. ಮುಂಜಾಗ್ರತಾ ಕ್ರಮವಾಗಿ ಸೋಮವಾರ ಬೆಳಗ್ಗೆ ತನಕ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆ ಶನಿವಾರ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಮಳೆ ತಗ್ಗಿದ ಕಾರಣ ನದಿಗಳ ನೀರಿನ ಮಟ್ಟವೂ ಕಡಿಮೆಯಾಗಿದೆ. ಭಾನುವಾರ ನೇತ್ರಾವತಿ ನದಿಯ ನೀರಿನ ಮಟ್ಟ ಕಡಿಮೆಯಾಗಿದ್ದು, 6.4 ಮೀ.ಗೆ ಇಳಿದಿದೆ. ಈಗಾಗಲೇ ಚಾರ್ಮಾಡಿ ಘಾಟಿಯ ಪ್ರದೇಶದಲ್ಲಿ ರಸ್ತೆಗೆ ಬಿದ್ದಿದ್ದ ಮಣ್ಣಿನ ತೆರವು ಮಾಡಲಾಗಿದೆ. ಇನ್ನು ಘಾಟಿ ಪ್ರದೇಶಗಳಲ್ಲಿ ಮಳೆ ಹೆಚ್ಚಾದರೆ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ತಿಳಿಸಿದ್ದಾರೆ.
ಇನ್ನು ಕುಮಾರಧಾರ ಹಾಗೂ ನೇತ್ರಾವತಿ ನದಿಗಳ ನೀರಿನ ಮಟ್ಟ ಭಾನುವಾರ ಮೂರು ಮೀಟರ್ಗೆ ಇಳಿದಿದೆ. ಶನಿವಾರ ನೇತ್ರಾವತಿ ನದಿ ನೀರಿನ ಮಟ್ಟ 26.5 ಮೀ.ಇದ್ದು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿತ್ತು. ಆದರೆ, ಭಾನುವಾರ ಮಳೆ ಕಡಿಮೆಯಾದ ಕಾರಣ ನೀರಿನ ಮಟ್ಟವು 24 ಮೀಟರ್ಗೆ ಇಳಿದಿದ್ದು, ಸಂಜೆ ವೇಳೆಗೆ 23 ಮೀಟರ್ ಇಳಿಕೆ ಕಂಡಿತ್ತು.
ಬೆಳ್ತಂಗಡಿ ಸೇರಿದಂತೆ ಬಂಟ್ವಾಳ, ಕಿನ್ನಿಗೋಳಿ ಮುಂತಾದ ಕಡೆಗಳಲ್ಲಿದ್ದ ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು, ಕೃಷಿ ನಾಶವಾಗಿದೆ ಎಂದು ವರದಿಯಾಗಿದೆ. ಭಾನುವಾರ ಕರಾವಳಿಯಲ್ಲಿ ಮೋಡ ಕವಿದ ವಾತವಾರಣವಿದ್ದು, ಸಾಮಾನ್ಯ ಮಳೆಯಾಗಿದೆ. ಕಾಲುವೆ ಪಕ್ಕದಲ್ಲಿರುವ ಗುಡ್ಡ ಕುಸಿದ ಕಾರಣ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಪಟ್ಟೆಯಲ್ಲಿ ಕೃತಕ ನೆರೆ ಸಂಭವಿಸಿದ್ದು, ಕೃಷಿ ನಾಶವಾಗಿದೆ. ಪುತ್ತೂರು-ಪಾಣಾಜೆ ರಸ್ತೆಯ ಪಕ್ಕದಲ್ಲಿದ್ದ ಮಣ್ಣಿನ ಗೋಡೆ ಕುಸಿದು ರಸ್ತೆಗೆ ಬಿದ್ದಿದ್ದು, ಉಮ್ಮರ್ ಎಂಬರ ಮನೆ ಕುಸಿದುಬಿದ್ದಿದೆ.
ಸೋಮೇಶ್ವರ, ಪಣಂಬೂರು ಸೇರಿಂದತೆ ಚಿತ್ರಾಪುರದಲ್ಲಿ ಕಡಲ್ಕೊರೆತೆ ಉಂಟಾಗಿದ್ದು, ಹೊಯ್ಗೆ ಬಜಾರ್ನಲ್ಲಿ ವಾಸಿಸುತ್ತಿದ್ದ ಸುಮಾರು 15 ಮೀನುಗಾರರ ಕುಟುಂಬ ಸೇರಿದಂತೆ 40 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಆಗಸ್ಟ್ 12ರವರೆಗೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ, ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಸೂಚಿಸಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, ಗೃಹರಕ್ಷಕರು ಮತ್ತು ಅಗ್ನಿಶಾಮಕ ದಳಗಳನ್ನು ಕಾರ್ಯಾಚರಣೆಗಳಿಗೆ ಸಿದ್ಧಪಡಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಕಳೆದ ಐದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಭಾನುವಾರ ಬೆಳಗ್ಗೆ ಮಳೆ ತಗ್ಗಿದ್ದು ಬಳಿಕ ಮಧ್ಯಾಹ್ನ ಭಾರಿ ಮಳೆಯಾಗಿದೆ. ಆದರೆ ಘಾಟಿ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಿದ್ದರಿಂದ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ.