ಬಂಟ್ವಾಳ, ಏ 24: ಆಸ್ಪತ್ರೆಯಿಂದ ಪರಾರಿಯಾದ ಪ್ರಕರಣವೊಂದರಲ್ಲಿ ಸೋಮವಾರ ಪಾಂಡೇಶ್ವರ ಪೊಲೀಸರಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯೊಬ್ಬ ಎಂ.ಇ.ಪಿ.ಪಕ್ಷದಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಜೈಲಿನಲ್ಲಿದ್ದುಕೊಂಡು ಮಂಗಳವಾರ ನಾಮಪತ್ರ ಸಲ್ಲಿಸಿರುವ ವಿದ್ಯಮಾನ ನಡೆದಿದೆ. ಅಭ್ಯರ್ಥಿ ಶಮೀರ್ ಯಾನೆ ಚಮ್ಮಿ ಶಾಂತಿಯಂಗಡಿ ಪರವಾಗಿ ಬೆಂಬಲಿಗ ಐಡಿಯಲ್ ಜಬ್ಬಾರ್ ಎಂಬವರು ಮಂಗಳವಾರ ಬೆಳಿಗ್ಗೆ ಮಿನಿವಿಧಾನಸೌಧದಲ್ಲಿ ಚುನಾವಣಾಧಿಕಾರಿಯವರಿಗೆ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಇಲ್ಯಾಸ್ ಐಟಿಸಿ, ಇಸ್ಮಾಯಿಲ್,ನಿಜಾಮುದ್ದಿನ್,ಅಬುಶಮೀರ್ ಹಾಜರಿದ್ದರು.ಇದಕ್ಕೂ ಮೊದಲು ನೂರಾರು ಮಂದಿ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಅಗಮಿಸಿದ್ದರು. ಅಭ್ಯರ್ಥಿ ಶಮೀರ್ 2014 ರಲ್ಲಿ ಬ್ರಹ್ಮರಕೊಟ್ಲುವಿನ ಟೋಲ್ ಗೇಟ್ ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ,ಈ ಸಂದರ್ಭ ಆಸ್ಪತ್ರೆಯಲ್ಲಿ ಅತನನ್ನು ಕಾವಲು ಕಾಯಿತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದ,ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಪ್ರಕರಣದಲ್ಲಿ ಈತನಿಗೆ ನ್ಯಾಯಾಲಯದಿಂದ ವಾರಂಟ್ ಕೂಡ ಜಾರಿಯಾಗಿತ್ತು ಎನ್ನಲಾಗಿದೆ.ಸೋಮವಾರ ಈತ ಸ್ವಯಂಪ್ರೇರಿತವಾಗಿ ನ್ಯಾಯಾಲಯಕ್ಕೆ ಹಾಜರಾಗಲು ತಯಾರಿ ನಡೆಸುತ್ತಿದ್ದನೆನ್ನಲಾಗಿದೆ.ಈ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ನಡುವೆ ಶಮೀರ್ ಎಂ.ಇ.ಪಿ.ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ದತೆ ಮಾಡಿಕೊಂಡಿದ್ದು,ನಾಮಪತ್ರ ಸಲ್ಲಿಕೆಗೆ ತಯಾರಿಯಲ್ಲಿದ್ದ ಎನ್ನಲಾಗಿದೆ.
ರಾಜೇಶ್ ನಾಯ್ಕ್ ನಾಮಪತ್ರ: ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯು.ರಾಜೇಶ್ ನಾಯ್ಕ್ ಅವರು ಮಂಗಳವಾರ ಎತಡನೇ ಸೆಟ್ ನಾಮಪತ್ರ ಸಲ್ಲಿಸಿದರು. ಪಕ್ಷದ ಮುಖಂಡರಾದ ದೇವದಾಸ ಶೆಟ್ಟಿ,ಗೋವಿಂದಪ್ರಭು,ಜಿ.ಆನಂದ,ಪ್ರಭಾಕರ ಪ್ರಭು ಈ ಸಂದರ್ಭ ಉಪಸ್ಥಿತರಿದ್ದರು.
ಜೆಡಿಎಸ್ ನಿಂದ ಅಭ್ಯರ್ಥಿ ಇಲ್ಲ : ಬಂಟ್ವಾಳ ಕ್ಷೇತ್ರದಿಂದ ಈ ಬಾರಿ ಜೆಡಿಎಸ್ ಕಣದಿಂದ ಹಿಂದೆ ಸರಿದಿದೆ.ದ.ಕ.ಜಿಲ್ಲೆಯಲ್ಲಿ ಮೂಡಬಿದ್ರೆ ಕ್ಷೇತ್ರದಿಂದ ಮಾತ್ರ ಜೆಡಿಎಸ್ ಕಣದಲ್ಲಿದೆ. ಬಂಟ್ವಾಳ ಕ್ಷೇತ್ರದಿಂದ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಪಕ್ಷದ ಇಲ್ಲಿನ ಮುಖಂಡರು ಹೇಳಿಕೊಂಡು ಬರುತ್ತಲೇ ಇದ್ದರು. ಹಾಗೆಯೇ ಅಬುಬಕ್ಕರ್ ಅಮ್ಮುಂಜೆ,ಪಿ.ಎ.ರಹೀಂ.ಮಹಮ್ಮದ್ ಶಫಿ,ಇಬ್ರಾಹಿಂ, ಪ್ರಕಾಶ್ ಗೋಮ್ಸ್ ಅವರ ಹೆಸರನ್ನು ರಾಜ್ಯ ಘಟಕಕ್ಕೆ ಶಿಫಾರಸುಮಾಡಲಾಗಿತ್ತು.ಆದರೆರಾಜ್ಯ ಘಟಕದಿಂದ ಇದಕ್ಕೆ ಸಕರಾತ್ಮಕವಾದ ಉತ್ತರ ಬಂದಿರಲಿಲ್ಲ,ಇತ್ತ ಇಬ್ರಾಹಿಂ ಕೈಲಾರ್ ಅವರು ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ರ ಸಹಿತ ಯಾರಿಗೂ ಮಾಹಿತಿ ನೀಡದೆ ಸೋಮವಾರ ನಾಮಪತ್ರ ಸಲ್ಲಿಸಿದ್ದರು.ಇವರಿಗೆ ಮಂಗಳವಾರ ಸಂಜೆಯವರೆಗೆ ಪಕ್ಷದಿಂದ ಸ್ಪರ್ಧೆಗೆ ಬಿ ಫಾರಂ ಸಿಕ್ಕಿಲ್ಲ ಹಾಗಯೇ ಇವರ ಹೆಸರನ್ನು ಪಕ್ಷ ಅಧಿಕೃತ ಘೋಷಣೆಕೂಡ ಮಾಡಿಲ್ಲ. ಈ ನಾಮಪತ್ರದ ಜೊತೆಗೆ ಪ್ರತ್ಯೇಕವಾಗಿ ಪಕ್ಷೇತರನಾಗಿ ಸ್ಪರ್ಧಿಸಲು ನಾಮಪತ್ರವನ್ನು ಇಬ್ರಾಹಿಂ ಕೈಲಾರ್ ಸಲ್ಲಿಸಿದ್ದಾರೆ.
ಬಾಗಿಲು ಮುಚ್ಚಿ ನಾಮಪತ್ರ ಸ್ವೀಕಾರ : ಬಂಟ್ವಾಳ ಚುನಾವಣಾಧಿಕಾರಿಯವರು ತಮ್ಮ ಕೊಠಡಿಯ ಬಾಗಿಲು ಮುಚ್ಚಿ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.ಅಭ್ಯರ್ಥಿ ಸಹಿತ ಐವರು ಬೆಂಬಲಿಗರು ಚುನಾವಣಾಧಿಕಾರಿಯವರ ಕೊಠಡಿ ಪ್ರವೇಶಿಸಿದಾ ಕ್ಷಣ ಹೊರಭಾಗದಲ್ಲಿ ಬಂದೋಬಸ್ತ್ ನಲ್ಲಿರುವ ಪೊಲೀಸರ ಮೂಲಕ ಬಾಗಿಲು ಮುಚ್ಚಿಸಲಾಗುತ್ತಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರ್ಬಂಧಿಸಿದ್ದು, ಅಲ್ಲದೆ ಯಾರು ಇತ್ತ ಸುಳಿಯದಂತೆ ಕೊಠಡಿಯ ಸುಮಾರು ಹತ್ತ ಅಡಿ ದೂರದಲ್ಲಿ ಬ್ಯಾರಿಕೇಡ್ ಅಡ್ಡಹಾಕಲಾಗಿತ್ತು.ನಾಮಪತ್ರ ಸಲ್ಲಿಕೆ ಸಂದರ್ಭ ಈ ರೀತಿ ಮಾಡುವುದು ಚುನಾವಣಾಧಿಕಾರಿಯವರ ಈ ಕ್ರಮ ಇದೇ ಮೊದಲು.