ಬಂಟ್ವಾಳ, ಆ. 10 (DaijiworldNews/MB) : ಅಂಗವೈಕಲ್ಯತೆಗೆ ಸೆಡ್ಡುಹೊಡೆದು ಕಾಲಿನಲ್ಲಿಯೇ ಪರೀಕ್ಷೆ ಬರೆಯುವ ಮೂಲಕ ಶಿಕ್ಷಣ ಸಚಿವರ ಮೆಚ್ಚುಗೆ ಗಳಿಸಿದ್ದ ಬಂಟ್ವಾಳದ ಕಂಚಿಕಾರ ಪೇಟೆಯ ಕೌಶಿಕ್ 424 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಅದೆಷ್ಟೋ ತೊಂದರೆಗಳು ಇದ್ದರೂ ಕೂಡಾ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕು ಎಂಬ ಉತ್ಸಾಹದಿಂದ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಇಲ್ಲದೆ ಕಾಲಿನಲ್ಲಿ ಪರೀಕ್ಷೆ ಬರೆಯುವ ಮೂಲಕ ಮಾದರಿಯಾಗಿದ್ದ ಕೌಶಿಕ್ನ್ನು ಖುದ್ದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಮ್ಮ ಟ್ವೀಟ್ ಮೂಲಕ ಹೊಗಳಿದ್ದರು. ಹಾಗೆಯೇ ಪಿಯುಸಿ ಶಿಕ್ಷಣಕ್ಕೆ ನೆರವಾಗುವ ಭರವಸೆಯನ್ನು ಶಾಸಕ ರಾಜೇಶ್ ನಾಯ್ಕ್ ನೀಡಿದ್ದರು.
ಬಂಟ್ವಾಳ ದ ಕಂಚಿಕಾರ ಪೇಟೆ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ಆಚಾರ್ಯ ಅವರ ಎರಡನೇ ಮಗನಾದ ಕೌಶಿಕ್, ಹುಟ್ಟಿನಿಂದಲೇ ಅಂಗವೈಕಲ್ಯತೆಯನ್ನು ಹೊಂದಿದ್ದು ಬಂಟ್ವಾಳ ಎಸ್.ವಿ.ಎಸ್.ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಚಟುವಟಿಕೆಗಳಲ್ಲಿಯೂ ಬಾಲಕ ಎತ್ತಿದ ಕೈ ಆಗಿದ್ದು ಒಂದನೇ ತರಗತಿಯಿಂದಲೇ ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆಯಲು ಆರಂಭಿಸಿದ್ದರು.