ಬೆಂಗಳೂರು, ಏ 24: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ ಆಕಾಂಕ್ಷಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಏ 24 ರ ಮಂಗಳವಾರ ತೆರೆಬಿದ್ದಿದೆ. ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿ, ಏ.17ರಿಂದ ಏ.24ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಒದಗಿಸಿತ್ತು. ಕೊನೆಯ ದಿನವಾದ ಇಂದು ಮಧ್ಯಾಹ್ನ 3ರ ವರೆಗೆ ನಾಮಪತ್ರ ಸಲ್ಲಿಸಲು ಸ್ಪರ್ಧಾಕಾಂಕ್ಷಿಗಳಿಗೆ ಚುನಾವಣಾ ಆಯೋಗ ಅವಕಾಶ ನೀಡಿತ್ತು. ಈ ಸಂಬಂದ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಚುನಾವಣಾ ಕಚೇರಿಯನ್ನು ತರೆದು ವ್ಯವಸ್ಥೆ ಮಾಡಲಾಗಿತ್ತು.
ಇನ್ನು ಕೊನೆಯ ದಿನವಾದ ಇಂದು ಎರಡು ಪಕ್ಷಗಳಿಗೂ ಪ್ರತಿಷ್ಟೆಯ ಕಣವಾಗಿರುವ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಶ್ರೀರಾಮುಲು, ಕಾಂಗ್ರೆಸ್ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸಿದರು. ಮಂಡ್ಯದಲ್ಲಿಯೂ ಅಂಬರೀಷ್ ಬದಲಾಗಿ ಕಣಕ್ಕಿಳಿಸಿದ ಪಿ. ರವಿಕುಮಾರ್ ಅವರು ನಾಮಪತ್ರ ಸಲ್ಲಿಸಿದರು. ವರುಣಾದಲ್ಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದ ಕಾರಣ ಅವರ ಬದಲಾಗಿ ತೋಟದಪ್ಪ ಬಸವರಾಜಪ್ಪ,ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಏ. 25 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ. 27ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ