ಬಂಟ್ವಾಳ, ಏ 25 : ಅಕ್ರಮವಾಗಿ ಖರೀದಿಸಿ, ದಾಸ್ತಾನು ಮಾಡಿದ್ದ ಮರಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ಇಲ್ಲಿನ ನೇತ್ರಾವತಿ ಸೇತುವೆಯ ಬಳಿ ಖಾಸಗಿ ಕಂಪನಿಯು ಅಕ್ರಮವಾಗಿ ಸುಮಾರು 33 ಲಕ್ಷ ಮೌಲ್ಯದ ಮರಳು ಖರೀದಿಸಿ ದಾಸ್ತಾನು ಮಾಡಿದ ಬಗ್ಗೆ ಬಂಟ್ವಾಳ ಪೊಲೀಸರು ತನಿಖೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಬಳಿಕ ಪ್ರಕರಣ ದಾಖಲಿಸುವಂತೆ ಸೂಚಿಸಿ ಭೂ ಮತ್ತು ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಸಕಲೇಶಪುರ ಬಿಸಿರೋಡಿನ ವರೆಗೆ ನಡೆಯುವ ಚತುಷ್ಪತ ಕಾಮಗಾರಿಯನ್ನು ನಡೆಸಲು ಗುತ್ತಿಗೆ ವಹಿಸಿಕೊಂಡಿರುವ ಎಲ್.ಎನ್.ಟಿ.ಕಂಪನಿಯು ಬಿಸಿರೋಡಿನ ಪಾಣೆಮಂಗಳೂರು ಖಾಸಗಿ ಜಾಗವನ್ನು ಬಾಡಿಗೆ ಪಡೆದ ಜಾಗದಲ್ಲಿ ಸುಮಾರು 2 ಸಾವಿರ ಲೋಡ್ ಮರಳನ್ನು ಅಕ್ರಮವಾಗಿ ಖರೀದಿಸಿ ಅಕ್ರಮವಾಗಿ ದಾಸ್ತಾನು ಮಾಡಿತ್ತು. ಇದರಲ್ಲಿ 1100 ಲೋಡ್ ಮರಳು ಸ್ಥಳದಲ್ಲಿ ದಾಸ್ತಾನು ಇರಿಸಿದ್ದು ಉಳಿದ ಮರಳನ್ನು ಬಳಕೆ ಮಾಡಿದೆ . ಇನ್ನು ಮಂಗಳೂರು ಎಸ್.ಪಿ. ರವಿಕಾಂತೇ ಗೌಡ ಮಾರ್ಗದರ್ಶನ ದಲ್ಲಿ ಪ್ರೋಬೆಸನರಿ ಐಪಿಎಸ್ ಅಕ್ಷಯ್ ಎಮ್ ಕೆ, ಗ್ರಾಮಾಂತರ ಎಸ್.ಐ ಪ್ರಸನ್ನ, ನಗರ ಠಾಣಾ ಎಸ್.ಐ. ಚಂದ್ರಶೇಖರ್ , ಅಪರಾಧ ವಿಭಾಗದ ಎಸ್.ಐ. ಹರೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.