ವಿಟ್ಲ, ಆ. 10, (DaijiworldNews/SM): ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕಾಗಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕಿಡ್ನಾಪ್ ಮಾಡಲು ಯತ್ನಿಸಿ ವಿಫಲವಾದ ಘಟನೆ ವಿಟ್ಲದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಎಸ್. ಐ. ನೇತೃತ್ವದ ತಂಡ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸಾಧಿಕ್ ಯಾನೆ ಬ್ಲೇಡ್ ಸಾಧಿಕ್ ಬಂಧಿತ ಆರೋಪಿ. ಆರೋಪಿ, ಪುಣಚ ಗ್ರಾಮದ ನಿವಾಸಿ ಅಬ್ದುಲ್ ಬಶೀರ್ ಎಂಬಾತನನ್ನು ಜುಲೈ 29 ರಂದು ಅಪಹರಿಸಲು ಯತ್ನಿಸಿ ವಿಫಲನಾಗಿದ್ದ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದ್ದು ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆಯ ವಿವರ:
ಜುಲೈ 29ರಂದು ಸುಮಾರು 2.30 ರವೇಳೆ ಬಕ್ರೀದ್ ಹಬ್ಬಕ್ಕೆ ಬಟ್ಟೆ ತೆಗೆದುಕೊಳ್ಳುವ ಉದ್ದೇಶದಿಂದ ಅಬ್ದುಲ್ ಬಶೀರ್ ವಿಟ್ಲದಲ್ಲಿರುವ ಎಂಪಯಾರ್ ಮಾಲ್ ಗೆ ಬಂದಿದ್ದರು.ಆ ಸಮಯದಲ್ಲಿ ಇವನಿಗೆ ಪರಿಚಯದ ಸಿದ್ದಿಕ್ ಎಂಬಾತ ಮಾತನಾಡುವ ಉದ್ದೇಶದಿಂದ ನನ್ನ ಜೊತೆ ಬಾ ಎಂದು ಕಾರಿನ ಬಳಿ ಕರೆದುಕೊಂಡು ಹೋಗಿ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತುಕೊಳ್ಳಲು ಹೇಳಿದಾಗ ಅದೇ ಕಾರಿನಲ್ಲಿ ಹಳೆಯ ಆರೋಪಿ ಸಾಧಿಕ್ ಯಾನೆ ಬ್ಲೇಡ್ ಸಾದಿಕ್ ಕಾರಿನೊಳಗೆ ಇದ್ದ.ಆತನನ್ನು ಗಮನಿಸಿ ಕಾರು ಹತ್ತಲು ಬಶೀರ್ ಹಿಂಜರಿದಾಗ ಇಬ್ಬರು ಸೇರಿ ಬಶೀರ್ ನನ್ನು ಕಾರಿನೊಳಗೆ ಬಲವಂತವಾಗಿ ದೂಡಿ ಕೂರಿಸಿಕೊಂಡಿದ್ದಾರೆ.
ನಂತರ ಕಾರು ದಾರಿ ಮಧ್ಯೆ ನಿಲ್ಲಿಸಿದ ಸಂದರ್ಭದಲ್ಲಿ ಬಶೀರ್ ಕಾರಿನಿಂದ ಜಿಗಿದು ತಪ್ಪಿಸಿಕೊಂಡು ಮನೆ ಸೇರಿದ್ದ. ಬಳಿಕ ಆರೋಪಿ ಮೊಬೈಲ್ ಗೆ ಸಂದೇಶ ಮತ್ತು ಕರೆ ಮಾಡಿ ಕೊಲ್ಲವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ. ಬಶೀರ್ ಅಬೂಬಕರ್ ಎಂಬವರ ಮಗಳನ್ನು ಪ್ರೀತಿಸಿ ಮದುವೆಯಾದ ವಿಚಾರದಲ್ಲಿ ಸಾಧಿಕ್ ಮತ್ತು ಸಿದ್ದಿಕ್ ಪೂರ್ವ ದ್ವೇಷ ಹೊಂದಿ ಕೊಲ್ಲುವ ಉದ್ದೇಶದಿಂದ ಕಿಡ್ನಾಪ್ ಮಾಡಿದ್ದಾನೆ ಎಂದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.