ಉಡುಪಿ, ಆ 10 (DaijiworldNews/PY): ಉಡುಪಿ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಮೂಲಕ, ಜನ ಸಾಮಾನ್ಯರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಮಲ್ಪೆ,ಮೊಳಕಾಲ್ಮೂರು 169 ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡು ಜನರ ಉಪಯೋಗಕ್ಕೆ ಅನೂಕೂಲವಾಗಬೇಕಿತ್ತು. ಆದರೆ ನಿಗದಿತ ಸಮಯಕ್ಕೆ ಪೂರ್ಣ ಗೊಂಡಿಲ್ಲ.ಇದರಿಂದ ಜನ ಸಾಮಾನ್ಯರಿಗೆ ಅನನೂಕೂಲವಾಗಿದೆ.ಈ ಕಾಮಗಾರಿಗಳಿಗೆ ಆದ್ಯತೆಯಲ್ಲಿ ಕೈಗೊಂಡು ಪೂರ್ಣಗೊಳಿಸಬೆಕೆಂದು ತಿಳಿಸಿದರು.
ಕಳೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ನ್ನು ಎಪ್ರಿಲ್ ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು ಆದರೆ ಪೂರ್ಣಗೊಳ್ಳದ ಬಗ್ಗೆ ಸಂಸದರು ಅಸಮಧಾನ ವ್ಯಕ್ತಪಡಿಸಿದರು.
ಕೊರೊನಾದಿಂದಾಗಿ ಕಾರ್ಮಿಕರು ಸ್ವ ಗ್ರಾಮಗಳಿಗೆ ಮರಳಿದ ಹಿನ್ನೆಲೆ ಪೂರ್ಣ ಗೊಳಿಸಲು ಆಗಿರುವುದಿಲ್ಲ. ಮುಂದಿನ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.
ಕುಂದಾಪುರದ ವಿನಾಯಕ ಟಾಕಿಸ್ ಮುಂಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ನೀರು ನಿಂತು ಸಾರ್ವಜನಿಕರು ಸಂಚಾರಕ್ಕೆ ತೊಂದರೆಯಗಿರುವ ಕುರಿತು ವ್ಯಾಪಕ ದೂರುಗಳು ಬರುತ್ತಿದ್ದು, ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಭಿಯಾಂತರುಗಳು ಇಂದೇ ಸ್ಥಳ ಪರಿಶೀಲಿಸಿ ತ್ವರಿತ ಗತಿಯಲ್ಲಿ ಸರಿಪಡಿಸುವಂತೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 169ಎ ಹಿರಿಯಡ್ಡ ಮತ್ತು ಒಂತಿಬೆಟ್ಟು ನಗರದ ಒಳಭಾಗದಲ್ಲಿಯೇ ಹಾದು ಹೋಗುತ್ತಿದ್ದು , ಯಾವುದೇ ಬೈಪಾಸ್ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು, ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಯಾವುದೇ ಧಾರ್ಮಿಕ ಸ್ಥಳಗಳಿಗೆ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸುವಂತೆ ಸಂಸದರು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಗಳಲ್ಲಿ ಅಂಬುಲೆನ್ಸ್ ಹಾಗೂ ವಿ.ಐಪಿ ಗಳ ವಾಹನ ಸಂಚರಿಸಲು ಪ್ರತ್ಯೇಕ ಮಾರ್ಗವನ್ನು ಕಾಯ್ದಿರಿಸಬೇಕೆಂದು ಇಂಜಿನಿಯರ್ ಗಳಿಗೆ ಸೂಚನೆ ನೀಡಿದರು. ಕರಾವಳಿ ಬೈಪಾಸ್ ಹಾಗೂ ಪರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದಾಗಿ ಗುಂಡಿಗಳು ಆಗಿದ್ದು ಇವುಗಳ ದುರಸ್ತಿ ಕಾರ್ಯಗಳನ್ನು ಆಗಿಂದಾಗ್ಗೆ ಕೈಗೊಂಡು ಯಾವುದೇ ಅಪಘಾತಗಳು ಆಗದಂತೆ ಎಚ್ಚರ ವಹಿಸುವಂತೆ ಹಾಗೂ ಇದಕ್ಕಾಗಿ ಪ್ರತ್ಯೇಕ ಯಂತ್ರವನ್ನು ಹಾಗೂ ಸಿಬ್ಬಂದಿಯನ್ನುಮಳೆಗಾಲ ಮುಗಿಯುವವರೆಗೆ ನಿಯೋಜಿಸುವಂತೆ ಸೂಚನೆ ನೀಡಿದರು.
ಬ್ರಹ್ಮಾವರ ಬಸ್ ಸ್ಟಾಂಡ್ ಬಳಿ ಅಂಡರ್ ಪಾಸ್, ಕಟಪಾಡಿಯಲ್ಲಿ ಅಂಡರ್ ಪಾಸ್ ನಿರ್ಮಾಣ, ಅಂಬಲಪಾಡಿ ಜಂಕ್ಷನ್ ಬಳಿಯ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಕೊರೊನಾದಿಂದ ಮಾತ್ರವೇ ಮರಣಗಳು ಸಂಭವಿಸಿಲ್ಲ, ಕೊರೊನಾದೊಂದಿಗೆ ಕ್ಯಾನ್ಸರ್, ಕಿಡ್ನಿ ಸಮಸ್ಯೆ ಮುಂತಾದ ಇತರೆ ಖಾಯಿಲೆಗಳಿಂದ ಮರಣ ಸಂಭವಿಸಿವೆ, ನಾಗರೀಕರು ರೋಗ ಲಕ್ಷಣ ಕಂಡ ಕೂಡಲೇ ಫೀವರ್ ಕ್ಲಿನಿಕ್ ಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು, ಕೊರೊನಾಗೆ ಉತ್ತಮ ಚಿಕಿತ್ಸೆ ಲಭ್ಯವಿದೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದ ಸಂಸದರು ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಗಳನ್ನು ಅಭಿನಂದಿಸಿದರು.
ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್,ಜಿಲ್ಲಾಧಿಕಾರಿ ಜಿ.ಜಗದೀಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಗಳು ಉಪಸ್ಥಿತರಿದ್ದರು.