ಮಂಗಳೂರು, ಆ. 10, (DaijiworldNews/SM): ಬೋಂದೆಲ್ ನ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ಸರಳವಾಗಿ ಆಚರಿಸಲಾಗಿದ್ದು, ಈ ವೇಳೆ ಕೊರೋನಾ ಸಂಕಷ್ಟದ ಕಾಲದಲ್ಲಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠಗುರುಗಳಾದ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ದಿವ್ಯ ಬಲಿಪೂಜೆ ನೆರವೇರಿಸಿದರು. ಈ ವೇಳೆ “ಕರ್ತರೇ ನಮ್ಮನ್ನು ರಕ್ಷಿಸಿ, ನಾವು ನಾಶವಾಗುತ್ತೆವೆ” ಈ ದೇವರ ವಾಕ್ಯದ ಮೇಲೆ ಪ್ರವಚನ ನೀಡಿದರು. ಇನ್ನು ಪ್ರವಾಸಿ ಭಕ್ತರಿಗಾಗಿ ವಿಶೇಷ ಪ್ರಾರ್ಥನೆ ಕೂಡ ನಡೆಯಿತು.
ಚರ್ಚ್ ನಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಜೊತೆಗೆ ಸರ್ಕಾರದ ಕೋವಿಡ್ 19 ನಿಯಮಾವಳಿಗಳನ್ನು ಪಾಲಿಸಿಕೊಂಡು ಬಲಿಪೂಜೆ ನೆರವೇರಿಸಲಾಯಿತು. ಚರ್ಚ್ ಪ್ರವೇಶಿಸುವ ಸಂಧರ್ಭದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆಯ ಪರಿಶೀಲನೆಗೆ ಸ್ವಯಂಸೇವಕರ ನಿಯೋಜನೆ, ಸೀಮಿತ ಸಂಖ್ಯೆಯ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ಬೋಂದೆಲ್ ಪುಣ್ಯಕ್ಷೇತ್ರದ ಧರ್ಮಗುರುಗಳಾದ ಫಾ. ಆಂಡ್ರ್ಯು ಲಿಯೊ ಡಿಸೋಜರವರು ಜನರ ಕೋರಿಕೆಗಳಿಗಾಗಿ ನೊವೆನಾ ಪ್ರಾರ್ಥನೆ ನೆರವೇರಿಸಿದರು. ಫಾ. ಕ್ಲಿಫರ್ಡ್ ಪಿಂಟೊ, ಪಾ. ರೂಪೇಶ್ ತಾವ್ರೊ ಹಾಗೂ ಹಲವಾರು ಧರ್ಮಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಂಡರು.
ಇನ್ನು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಪೂರ್ವ ತಯಾರಿಗಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆ ಭಾನುವಾರದ ವರೆಗೆ ನಡೆದಿತ್ತು.