ಸುರತ್ಕಲ್, ಏ 25 : ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಿಂದ ದೂರ ಉಳಿಯುವುದಾಗಿ, ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಅವರು ಹೇಳಿದ್ದಾರೆ. ಪಕ್ಷದಿಂದ ಟಿಕೆಟ್ ವಂಚಿತರಾಗಿರುವ ಸತ್ಯಜಿತ್ ಅವರೊಂದಿಗೆ ಮಾತುಕತೆಗೆ ಮುಂದಾಗಿದ್ದ ಬಿಜೆಪಿ ವರಿಷ್ಟರು, ಮತ್ತೆ ಹಿಂದೆ ಸರಿದಿದ್ದು, ಇದರಿಂದ ಅಸಮಾಧಾನಗೊಂಡಿರುವ ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಪ್ರಚಾರದಿಂದ ದೂರ ಸರಿಯುವುದಾಗಿ ತಿಳಿಸಿದ್ದಾರೆ.
ಮಂಗಳವಾರ ಮಾತುಕತೆಗೆ ಬರುವುದಾಗಿ ಹೇಳಿದ್ದ ವರಿಷ್ಟರು, ಬಾರದೆ ನಿರ್ಲಕ್ಷ್ಯ ಧೋರಣೆ ತಳೆದಿದ್ದು, ಇದರಿಂದ ನನಗೆ ನೋವುಂಟಾಗಿದೆ. ಹೀಗಾಗಿ ನಾನು ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಇದು ನನ್ನ ವೈಯಕ್ತಿಕ ನಿರ್ಧಾರವಾಗಿದ್ದು, ನನ್ನ ಕಾರ್ಯಕರ್ತರು, ಅಭಿಮಾನಿಗಳು, ಅವರದೇ ನಿರ್ಧಾರ ಕೈಗೊಳ್ಳುವಲ್ಲಿ ಸ್ವತಂತ್ರರು ಎಂದು ಸ್ಪಷ್ಟಪಡಿಸಿದ್ದಾರೆ. ಗುರುಪುರ ಸ್ವಾಮೀಜಿಗಳ ಮಾತಿಗೆ ಗೌರವ ನೀಡಿ ಸ್ವರ್ಧೆಯಿಂದ ಹಿಂದೆ ಸರಿದಿದ್ದೇನೆ. ಪಕ್ಷದ ವಿರುದ್ದ ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ.