ಕಾಸರಗೋಡು, ಆ. 11 (DaijiworldNews/MB) : ಭಾರೀ ಮಳೆಯ ಅಬ್ಬರಕ್ಕೆ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ 3. 70 ಕೋಟಿ ರೂ.ಗಳ ಕೃಷಿ ಹಾನಿ ಉಂಟಾಗಿದೆ. 286. 25 ಹೆಕ್ಟೇರ್ ಸ್ಥಳಗಳಲ್ಲಿನ ಬೆಳೆಗಳು ಹಾನಿಯಾಗಿವೆ. 1862 ರಷ್ಟು ಕೃಷಿಕರಿಗೆ ನಷ್ಟ ಉಂಟಾಗಿದೆ ಎಂದು ಜಿಲ್ಲಾಡಳಿತದ ಅಂಕಿ ಅಂಶ ತಿಳಿಸಿದೆ.

ಅಡಕೆ, ತೆಂಗು, ಕಾಳುಮೆಣಸು, ಭತ್ತ, ಮರಗೆಣಸು, ನೇಂದ್ರ ಬಾಳೆ ಮೊದಲಾದ ಬೆಳೆಗಳು ಹಾನಿಗೊಂಡಲ್ಲಿ ಸೇರಿದೆ. ಸೋಮವಾರ ಮಂಜೇಶ್ವರ ತಾಲೂಕಿನಲ್ಲಿ 22 ಕುಟುಂಬಗಳ 99 ಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ ಏಳು ಮನೆಗಳು ಪೂರ್ಣವಾಗಿ, 15 ಮನೆಗಳು ಭಾಗಷ: ವಾಗಿ ಕುಸಿದಿದೆ. ಬಂಬ್ರಾಣ ಬಯಲು ಜಲಾವೃತಗೊಂಡ ಹಿನ್ನಲೆಯಲ್ಲಿ ಈ ಪ್ರದೇಶದ ಹಲವು ಕುಟುಂಬಗಳನ್ನು ತೆರವುಗೊಳಿಸಲಾಗಿದೆ. ಪೈವಳಿಕೆ ಯಲ್ಲಿ ಗುಡ್ಡ ಕುಸಿದ ಹಿನ್ನಲೆಯಲ್ಲಿ ಕೆಲ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಹೊಸದುರ್ಗ ತಾಲೂಕಿನ ತುರುತ್ತಿ, ಉದುಮ, ಕಯ್ಯೂರು, ಅಂಬಲತ್ತರ, ಪನಯಾಲ್ ಮೊದಲಾದೆಡೆ ಅಪಾರ ಹಾನಿಯಾಗಿದೆ. 10 ಮನೆಗಳು ಭಾಗಷಃವಾಗಿ ಕುಸಿದಿದೆ. ವೆಳ್ಳರಿಕುಂಡು ತಾಲೂಕಿನಲ್ಲಿ 59 ಮನೆಗಳಿಗೆ ಹಾನಿ ಉಂಟಾಗಿದೆ.
ಕಾಸರಗೋಡು ತಾಲೂಕಿನಲ್ಲಿ 206 ಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದ್ದು, ಎರಡು ಮನೆಗಳು ಪೂರ್ಣವಾಗಿ 86 ಮನೆಗಳು ಭಾಗಶ:ವಾಗಿ ಹಾನಿಗೊಂಡಿದೆ. ಸೋಮವಾರ ಮಳೆ ಪ್ರಮಾಣ ತಗ್ಗಿರುವುದರಿಂದ ಜಿಲ್ಲೆಯ ಬಹುತೇಕ ನದಿಗಳ ನೀರಿನ ಮಟ್ಟ ಇಳಿಕೆಯಾಗಿದೆ. ಇದರಿಂದ ಕಾಳಜಿ ಕೇಂದ್ರ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿದ್ದ ನೂರಾರು ಮಂದಿ ತಮ್ಮ ಮನೆ ಗಳಿಗೆ ಮರಳಿದ್ದಾರೆ. ಜೂನ್ ಒಂದರಿಂದ ಇದುವರೆಗೆ ಜಿಲ್ಲೆಯಲ್ಲಿ 19 ಮನೆಗಳು ಪೂರ್ಣವಾಗಿ 210 ಮನೆಗಳು ಭಾಗಷಃವಾಗಿ ಕುಸಿದಿದೆ. ಈ ತನಕ ನಾಲ್ವರು ಮೃತಪಟ್ಟಿದ್ದಾರೆ.
ಯೆಲ್ಲೋ ಅಲರ್ಟ್
ಜಿಲ್ಲೆಯಲ್ಲಿ ಆ. 11 ರ ಮಂಗಳವಾರ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ರಾಜ್ಯ ವಿಪತ್ತು ನಿವಾರಣಾ ಪ್ರಾಧಿಕಾರ ತಿಳಿಸಿದೆ. ಆಗಸ್ಟ್ 12 ರಿಂದ ಮಳೆ ಕಡಿಮೆಯಾಗಲಿದೆ. 12 ರಿಂದ 14 ರ ರ ತನಕ ಜಿಲ್ಲೆಯಲ್ಲಿ ಗ್ರೀನ್ ಅಲರ್ಟ್ ಘೋಷಿಸಲಾಗಿದೆ.