ಮಂಗಳೂರು, ಆ. 11 (DaijiworldNews/MB) : ಕೊರೊನಾ ಕಾರಣದಿಂದಾಗಿ ಮಂಗಳವಾರ ಶ್ರೀ ಕೃಷ್ಣಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಈ ಬಾರಿ ಅವಕಾಶವಿಲ್ಲದ ಕಾರಣ ಮನೆಯಲ್ಲಿಯೇ ಹಬ್ಬವನ್ನು ಆಚರಿಸಲಾಗುತ್ತಿದೆ.







ಪ್ರತಿ ವರ್ಷದಂತೆ ನಡೆಯುವ ಸಾರ್ವಜನಿಕ ಮೊಸರು ಕುಡಿಕೆ ಉತ್ಸವಕ್ಕೆ ಅವಕಾಶವಿಲ್ಲದ ಕಾರಣ ನಗರದ ರಸ್ತೆಗಳು ಕಳೆಗುಂದಿದೆ. ಪ್ರತಿ ವರ್ಷ ನಗರದ ಕೊಟ್ಟಾರ, ಅತ್ತಾವರ, ಕುಲಶೇಖರ, ತೊಕ್ಕೂಟ್ಟು ಸಹಿತ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮೊಸರು ಕುಡಿಕೆ ಉತ್ಸವ ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಯಾವುದೇ ಸ್ಥಳದಲ್ಲಿ ಮೊಸರು ಕುಡಿಕೆಯ ಉತ್ಸವವಿಲ್ಲ.
ಹಲವಾರು ಭಕ್ಷ್ಯಗಳನ್ನು ತಯಾರಿಸಿ ಮನೆಯಲ್ಲಿ ಆಚರಿಸಲಾಗುವ ಈ ಹಬ್ಬ ಮಕ್ಕಳಿಗೂ ಕೂಡಾ ಅಚ್ಚುಮೆಚ್ಚು. ಪ್ರತಿ ವರ್ಷವು ಮಕ್ಕಳಿಗೆ ಕೃಷ್ಣ ವೇಷಭೂಷಣ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಕೃಷ್ಣ ವೇಷಧಾರಿ ಮಕ್ಕಳ ಕಲರವವಿಲ್ಲ. ಈ ವರ್ಷ ಕೊರೊನಾ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಮೂಡೆ, ಹೂವು ಖರೀದಿ ಮಾಡುವ ಜನರು ಕೂಡಾ ವಿರಳವಾಗಿದ್ದಾರೆ.
ಇಸ್ಕಾನ್ ಸಂಸ್ಥೆಗಳು, ಕುಲಶೇಖರ ಶ್ರೀ ವೀರ ನಾರಾಯಣ ದೇವಸ್ಥಾನ, ರಥಬೀದಿ ಶ್ರೀ ಗೋಪಾಲಕೃಷ್ಣ ಸನ್ನಿಧಿ, ಕದ್ರಿ ದೇಗುಲ, ಕುದ್ರೋಳಿ ಶ್ರೀ ಗೋಕರ್ಣನಾಥ ದೇಗುಲ, ಕೊಟ್ಟಾರ ಶ್ರೀ ಕೃಷ್ಣ ಜ್ಞಾನೋದಯ ಭಜನ ಮಂದಿರ, ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಸ್ಥಾನ, ಕುಂಪಲ ಬಾಲಕೃಷ್ಣ ಮಂದಿರ ಸಹಿತ ವಿವಿಧ ಕಡೆಗಳಲ್ಲಿ ಸರಳವಾಗಿ ಕೃಷ್ಣಾಷ್ಟಮಿ ಆಚರಣೆ ನಡೆಸಲಾಗುತ್ತಿದೆ.