ಕಾರ್ಕಳ, ಆ 11 (Daijiworld News/MSP): ಕೊವಿಡ್-19 ಆತಂಕವು ಇನ್ನು ಕೆಲ ತಿಂಗಳೊಳಗಾಗಿ ಸಂಪೂರ್ಣವಾಗಿ ದೂರ ಉಳಿಯುವುದರೊಂದಿಗೆ ನಾಗರಿಕರ ಜನ ಜೀವಕ್ರಮವು ಪುನರ್ಚೇತನಗೊಳ್ಳಲಿದೆ. ಪ್ರತಿಯೊಬ್ಬರು ಆತ್ಮಸೈರ್ಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ಗೃಹ ಸಚಿವ ಹಾಗೂ ಉಡುಪಿ ಉಸ್ತುವಾರಿ ಸಚಿವ ಬಸವರಾಜು ಬೊಮ್ಮಾಯಿ ಹೇಳಿದರು.



ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 10 ಹಾಸಿಗೆಯ ತುರ್ತು ನಿಗಾ ಘಟಕವನ್ನು ಲೋಕಾರ್ಪಣೆಗೈದು ಅವರು ಮಾತನಾಡಿದರು. ಕೋವಿಡ್ ಬಂದಿದೆ ಎಂದು ದಿನನಿತ್ಯದ ಚಟುವಟಿಕೆ ನಿಲ್ಲಿಸಲು ಅಸಾಧ್ಯ. ಆದರೆ ಸ್ವಯಂ ಶಿಸ್ತಿನ ಆವಶ್ಯಕತೆ ಇದೆ. ಸಾಮಾಜಿಕ ಸ್ವಾಸ್ಥ್ಯ ಬಹಳ ಮುಖ್ಯವಾದುದು. ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಆರೋಗ್ಯದ ಬಗ್ಗೆ ಜಾಗೃತಿ ಉಂಟಾದಲ್ಲಿ ಕೋವಿಡ್ನ್ನು ಸುಲಭವಾಗಿ ನಿವಾರಿಸಲು ಸಾಧ್ಯ. ಮುಂಬರುವ ದಿನಗಳಲ್ಲಿ ಕರೋನಾ ಬಾಧಿತರಿಗೆ ಆತಂಕ ಆಗಬಾರದು ಎಂಬ ನೆಲೆಯಲ್ಲಿ ಕಾರ್ಕಳದಲ್ಲಿ 10 ಐಸಿಯ ವೆಂಟಿಲೇಟರ್ ಮೊದಲಾದ ಸುಸಜ್ಜಿತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಇಂತಹ ಘಟಕದಲ್ಲಿ ಆಕ್ಸಿಜನ್ ಅಗತ್ಯಗತ್ಯವಾಗಿದೆ. ಅದರ ನಿರ್ವಹಣೆಯನ್ನು ಹಿರಿಯ ವೈದ್ಯರೊಬ್ಬರಿಗೆ ವಹಿಸಿಕೊಡಬೇಕೆಂದು ಸೂಚಿಸಿದರು.
ಕಾರ್ಕಳದ ಅಭಿವೃದ್ಧಿ ಮಾದರಿ
ಕರೋನಾ, ಮಳೆ ಪ್ರವಾಹದ ನಡುವೆಯೂ ಕಾರ್ಕಳದ ಅಭಿವೃದ್ಧಿ ಕಾಮಗಾರಿ ವೇಗವಾಗಿ ಸಾಗುತ್ತಿದೆ.ಜವುಳಿ ಪಾರ್ಕ್ ನಿರ್ಮಾಣದ ಮೂಲಕ ಯುವ ಜನತೆಗೆ ಉದ್ಯೋಗ ಲಭಿಸಲಿದೆ. ಎಣ್ಣೆಹೊಳೆಯಲ್ಲಿ ನೀರಾವರಿ ಯೋಜನೆಯ ಮೂಲಕ ಕರಿಯಕಲ್ಲು ಕಾರ್ಕಳ ಸಂಪತ್ಭರಿತ ನಾಡಾಗಲಿದೆ ಎಂದರು.
ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ಕುಮಾರ್ ಮಾತನಾಡಿ, ತುರ್ತು ನಿಗಾ ಘಟಕವು ಇದ್ದಾಗ ಮಾತ್ರ ಮುಂದೆ ಉಂಟಾಗಬಹುದಾದ ಯಾವುದಾದರೂ ಅನಾಹುತ ತಪ್ಪಿಸಲು ಸಾಧ್ಯ. ಕೊವಿಡ್-೧೯ ನಿಗ್ರಹಕ್ಕೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ಭುವನೇಂದ್ರ ರೆಸಿಡೆನ್ಸಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಆರೋಗ್ಯ ಇಲಾಖಾ ಸಿಬ್ಬಂದಿಗಳು, ವೈದ್ಯರು, ನರ್ಸ್ಗಳ ಸಹಕಾರದಿಂದ ಉತ್ತಮ ಸೇವೆ ದೊರಕಿಸುವಲ್ಲಿ ಸಾಧ್ಯವಾಗಿದೆ ಎಂದರು.
ನಿರಂತರವಾಗಿ ನಡೆಯಲಿದೆ. ತಾಲೂಕು ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,ಜಿಲ್ಲಾಪಂಚಾಯತ್ ಸದಸ್ಯರುಗಳಾದ ಇರ್ವತ್ತೂರು ಉದಯ ಎಸ್.ಕೋಟ್ಯಾನ್,ಸುಮಿತ್ ಶೆಟ್ಟಿ, ದಿವ್ಯಶ್ರೀ ಅಮೀನ್, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ಚಂದ್ರ,ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ.ಹರ್ಷ,ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ,ಪುರಸಭಾ ಮೂಖ್ಯಾಧಿಕಾರಿ ರೇಖಾ ಶೆಟ್ಟಿ, ತಾಲೂಕು ಸರಕಾರಿ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ. ಪಿ.ಕೆ.ಮಲ್ಯ, ಮೊದಲಾದವರು ಉಪಸ್ಥಿತರಿದ್ದರು. ಪ್ರಕಾಶ್ ರಾವ್ ಸ್ವಾಗತಿಸಿದರು. ನಾಗೇಶ್ ನಿರೂಪಿಸಿ ಧನ್ಯವಾದವಿತ್ತರು.