ಏ. 25: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಶ್ರೀರಾಮುಲು ಸ್ಪರ್ಧೆಯಿಂದಾಗಿ ಬಾದಾಮಿ ಈಗ ಜಿದ್ದಾಜಿದ್ದಿನ ರಣಕಣವಾಗಿ ಮಾರ್ಪಾಡಾಗಿದ್ದು, ಜಾತಿ ರಾಜಕೀಯದಲ್ಲಿ ಎರಡು ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ಲೆಕ್ಕಚಾರದೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ವಾಲ್ಮೀಕಿ ಸಮುದಾಯದ ನಾಯಕ ಸತೀಶ್ ಜಾರಕಿಹೊಳಿ ಸಿಎಂ ನಾಮಪತ್ರ ಸಲ್ಲಿಸುವಾಗಲೇ ಕ್ಷೇತ್ರಕ್ಕೆ ಆಗಮಿಸಿದ್ದು, ತಮ್ಮ ಸಮುದಾಯದ ನಿರ್ಣಾಯಕ ಮತಗಳು ಶ್ರೀರಾಮುಲುವತ್ತ ಹೋಗದಂತೆ ಮಾಡಲು ರಣ ತಂತ್ರ ಆರಂಭಿಸಿದ್ದಾರೆ. ಅತ್ತ ಕಡೆ ಬಿಜೆಪಿ ಕೂಡಾ ಸಂಸದ ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಿ ಸಿಎಂ ಸಿದ್ದರಾಮಯ್ಯ ಅವರ ಗೆಲುವಿನ ಹಾದಿಗೆ ಬಿಗ್ ಬ್ರೇಕ್ ಹಾಕಿದ್ದಾರೆ.
ನಾಯಕ ಜನಾಂಗದ ಮತಗಳು, ಲಿಂಗಾಯತ ಮತಗಳು ಹಾಗೂ ಇತರೆ ಹಿಂದುಳಿದ ವರ್ಗಗಳು ದಲಿತ ಮತಗಳನ್ನು ಸೆಳೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಹೀಗಾಗಿ ಈ ಎಲ್ಲ ಲೆಕ್ಕಾಚಾರಗಳನ್ನು ಗಮನಿಸಿದರೆ ಬಾದಾಮಿಯಲ್ಲಿ ಸಿದ್ಧರಾಮಯ್ಯನವರ ಗೆಲುವು ಅಷ್ಟು ಸುಲಭವಲ್ಲ.
ಮುಖ್ಯಮಂತ್ರಿ ಹಾಗೂ ಬಿಜೆಪಿಯ ಗಣಿ ಧಣಿಯ ನೇರ ಫೈಟ್ನೊಂದಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿ ಹೊರಹೊಮ್ಮಲಿದೆ. ಬಾದಾಮಿ ಬನಶಂಕರಿ ದೇವಿಯ ಕೃಪೆ ಯಾರಿಗೆ ಒಲಿಯಲಿದೆ ಎಂಬುದು ಮೇ 15ರಂದು ಗೊತ್ತಾಗಲಿದೆ.