ಚಿಕ್ಕಮಗಳೂರು,ಆ 11 (DaijiworldNews/HR) :ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ರಾಷ್ಟೀಯ ಹೆದ್ದಾರಿ-73 (ಹಳೆ ರಾ. ಹೆದ್ದಾರಿ234) ಮಂಗಳೂರು ತುಮಕೂರು ರಸ್ತೆಯ 86.200 ಕಿ.ಮೀ (ಚಿಕ್ಕಮಗಳೂರು ಜಿಲ್ಲಾ ಗಡಿ) ಯಿಂದ 99.200 ಕಿ. ಮೀ(ಕೊಟ್ಟಿಗೆಹಾರ) ವರೆಗೆ ಚಾರ್ಮುಡಿ ಘಾಟ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಿರುವುದನ್ನು ತೆರವುಗೊಳಿಸಲಾಗಿದೆ.

ಈ ಹಿಂದಿನಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಆದೇಶಿಸಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಹೆಚ್ಚು ಮಳೆ ಹಿನ್ನೆಲೆ ರಸ್ತೆಯಲ್ಲಿ ಅಡ್ಡಲಾಗಿ ಬಿರುಕು ಕಾಣಿಸಿಕೊಂಡಿದ್ದರಿಂದ ಸಾರ್ವಜನಿಕರ ಮತ್ತು ವಾಹನ ಸಂಚಾರದ ಸುರಕ್ಷತೆ ಹಿತದೃಷ್ಟಿಯಿಂದ ಆಗಸ್ಟ್ 11ರ ಮಧ್ಯರಾತ್ರಿ 12 ರವರಗೆ ಸಂಪೂರ್ಣವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪ್ರಸ್ತುತ ಮಳೆ ಕಡಿಮೆಯಾಗಿ ಭೂ ಕುಸಿತ ತೆರವುಗೊಳಿಸಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.