ವಿಟ್ಲ, ಆ. 11 (DaijiworldNews/SM): ಮಕ್ಕಳಿಗೆ ತಿಂಡಿ ತರಲೆಂದು ಪೇಟೆಗೆ ಹೋಗಿ ನಾಪತ್ತೆಯಾಗಿದ್ದ ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿಯ ಮೃತದೇಹ ನೆಕ್ಕರೆ ಹೊಳೆಯಲ್ಲಿ ಪತ್ತೆಯಾಗಿದೆ. ಸತೀಶ್(44) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಸತೀಶ್ ಅವರು ಬಂಟ್ವಾಳದಲ್ಲಿ ಭತ್ತದ ಕೊಯಿಲು ಮತ್ತು ಕಟಾವು ಮಾಡುವ ಕೆಲಸ ಮಾಡುತ್ತಿದ್ದು, ಆದಿತ್ಯವಾರ ಕೆಲಸ ಮುಗಿಸಿಕೊಂಡು ಮನೆಯ ಕಡೆ ಬಂದಿದ್ದರು. ಬಳಿಕ ಅಕ್ಕನ ಮಕ್ಕಳಿಗೆ ತಿಂಡಿ ತರಲೆಂದು ಸಮೀಪದ ಅಂಗಡಿಗೆಂದು ತೆರಳಿದವರು ವಾಪಾಸು ಮನೆಗೆ ಬರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಆಶೋಕ್ ಪೊಲೀಸರಿಗೆ ದೂರು ನೀಡಿದ್ದರು.
ನಂದರಬೆಟ್ಟು ಎಂಬಲ್ಲಿನ ತೋಡಿನ ಸಮೀಪದ ಗಿಡದ ಮೊದೆಯ ಮಧ್ಯೆ ಸತೀಶ್ ಅವರು ಧರಿಸಿದ ವೇಸ್ಟಿ ಹಾಗೂ ಕೊಡೆ ಕಂಡುಬಂದಿದ್ದು ಇವರು ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ನಾಪತ್ತೆಯಾಗಿರಬೇಕು ಎಂಬ ಸಂಶಯ ಮನೆಯವರು ವ್ಯಕ್ತ ಪಡಿಸಿದ್ದರು.
ಇದೀಗ ಅವರ ಮೃತದೇಹ ಪೆರುವಾಯಿಯ ನೆಕ್ಕರೆ ಹೊಳೆಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.