ಏ,25: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ ಆಕಾಂಕ್ಷಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಏ 24 ರಂದು ತೆರೆಬಿದ್ದಿದ್ದು, ಇಂದು ಚುನಾವಣಾ ಆಯೋಗ ರಾಜ್ಯಾದ್ಯಂತ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದೆ. ಪ್ರಮುಖ ರಾಜಕೀಯ ಪಕ್ಷಗಳ ಮತ್ತು ಪಕ್ಷೇತರರು ಸೇರಿ ರಾಜ್ಯಾದ್ಯಂತ ಒಟ್ಟು 4,109 ಅಭ್ಯರ್ಥಿಗಳು ಉಮೇದು ಸಲ್ಲಿಸಿದ್ದಾರೆ. ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ವೇಳೆ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೆಲ ಅಭ್ಯರ್ಥಿಗಳ ನಾಮಪತ್ರ ರದ್ದಾಗುವ ಸಾಧ್ಯತೆ ಇದೆ.
ಈಗಾಗಲೇ ಸಾಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಗೋಡು ತಿಮ್ಮಪ್ಪ ಅವರ ನಾಮಪತ್ರದಲ್ಲಿ ಪತ್ನಿ ಮತ್ತು ಅವಲಂಬಿತರ ಮಾಹಿತಿ, ಚಿನ್ನಾಭರಣ ವಿವರ, ಶೈಕ್ಷಣಿಕ ವಿವರವನ್ನೂ ಸಮರ್ಪಕವಾಗಿ ನಮೂದಿಸಿಲ್ಲ ಎನ್ನುವ ಕಾರಣಕ್ಕಾಗಿ ನಾಮಪತ್ರ ರದ್ದಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇದರೊಂದಿಗೆ ಬೆಂಗಳೂರಿನ ರಾಜಾಜಿನಗರದ ಅಭ್ಯರ್ಥಿ, ಮಾಜಿ ಮೇಯರ್ ಪದ್ಮಾವತಿ ಹಾಗೂ ಅವರ ಪುತ್ರ ನ ಮೇಲೆ ಬ್ಯಾಂಕ್ ಸಾಲ ಪಡೆದು ವಂಚನೆ ಪ್ರಕರಣ ಇರುವುದರಿಂದ ನಾಮಪತ್ರ ಪರಿಶೀಲನೆಗೆ ಚುನಾವಣಾ ಆಯೋಗ ತಡೆ ಹಿಡಿದಿದೆ. ಈ ನಡುವೆ ಕೋಲಾರ ಜಿಲ್ಲೆ ಮುಳಬಾಗಿಲು ಶಾಸಕ ಹಾಗೂ ಮುಳಬಾಗಿಲು ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಾಮಪತ್ರ ಅಸಿಂಧು ಮಾಡಲಾಗಿದೆ.