ಮಂಜೇಶ್ವರ, ಆ 12 (Daijiworld News/MSP): ಅತೀ ವೇಗದಿಂದ ಬಂದ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ಉಪ್ಪಳ ಬಳಿಯ ಬೇಕೂರಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಬೇಕೂರು ಬೊಳ್ಳಾರಿನ ಕೆ.ರಾಮ ಭಟ್ (62) ಎಂದು ಗುರುತಿಸಲಾಗಿದೆ.

ರಾಮ ಭಟ್ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಅತೀ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು , ಕಾರು ಚಾಲಕ ಗಾಂಜಾ ಸೇವಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ . ಅಪಘಾತ ನಡೆದ ಸಂದರ್ಭದಲ್ಲೇ ಈ ದಾರಿಯಾಗಿ ಪೊಲೀಸ್ ಜೀಪು ಬರುವುದನ್ನು ಗಮನಿಸಿದ ಈತ ಕಾರು ಬಿಟ್ಟು ಸಮೀಪದ ನಿರ್ಜನ ಸ್ಥಳದ ಮೂಲಕ ಪರಾರಿಯಾಗಿದ್ದಾನೆ.
ಈತ ಏಳಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿದ್ದಾನೆ. ಅಪಘಾತ ಕ್ಕಿಂತ ಮೊದಲು ಈತ ನಿರ್ಲಕ್ಷದಿಂದ ಕಾರು ಚಲಾಯಿಸಿ ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದನು . ನಾಗರಿಕರು ಈತನನ್ನು ಹಿಡಿಯಲು ಪ್ರಯತ್ನಿಸಿದಾಗ ಕಾರು ಸಹಿತ ಅತೀ ವೇಗದಲ್ಲಿ ಪರಾರಿಯಾಗಲೆತ್ನಿಸಿದ್ದು , ಈ ಸಂದರ್ಭದಲ್ಲಿ ಅಪಘಾತ ನಡೆದಿದೆ. ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.