ಪುತ್ತೂರು, ಆ. 12 (DaijiworldNews/MB) : ದಕ್ಷಿಣ ಕನ್ನಡ ವಿದ್ಯಾವಂತರ ಜಿಲ್ಲೆ ಹಾಗೂ ಅಭಿವೃದ್ದಿ ಹೊಂದಿರುವ ಜಿಲ್ಲೆ ಎಂದು ಕರೆಯಲಾಗುತ್ತದೆ. ಆದರೆ ಈ ಆನ್ಲೈನ್ ತರಗತಿ ಆರಂಭದ ಬಳಿಕ ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಸಮಸ್ಯೆ ಉಂಟಾಗಿ ಶಿಕ್ಷಣ ಪಡೆಯಲು ಪರದಾಡುವಂತಾಗಿದೆ. ಏತನ್ಮಧ್ಯೆ ನೆಟ್ವರ್ಕ್ ಸಮಸ್ಯೆಯಿಂದ ಉಂಟಾದ ಕಾರಣದಿಂದಾಗಿ ಆನ್ಲೈನ್ ತರಗತಿಗಾಗಿ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಾಲೆತ್ತಡಿ ಎಂಬಲ್ಲಿನ ವಿದ್ಯಾರ್ಥಿಗಳು ಬಸ್ ನಿಲ್ದಾಣವನ್ನೇ ಕ್ಲಾಸ್ ರೂಂ ಅನ್ನಾಗಿಸಿದ್ದಾರೆ.

ಕೊರೊನಾ ಕಾರಣದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟ ಬಳಿಕ ಆನ್ಲೈನ್ ತರಗತಿಗಳು ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ನೆಟ್ವರ್ಕ್ನದ್ದೆ ದೊಡ್ಡ ಸಮಸ್ಯೆ ಉಂಟಾಗಿದೆ. ನೆಟ್ವರ್ಕ್ ಸಮಸ್ಯೆಯಿಂದ ಆನ್ಲೈನ್ ತರಗತಿಗಳನ್ನು ಹಾಜರಾಗುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಾಲೆತ್ತಡಿ ಎಂಬಲ್ಲಿನ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲೇ ಆನ್ಲೈನ್ ತರಗತಿಯನ್ನು ಪಡೆಯುತ್ತಿದ್ದಾರೆ.
ಇಲ್ಲಿನ ಹತ್ತಾರು ವಿದ್ಯಾರ್ಥಿಗಳು ಬೆಳಿಗ್ಗೆ ಎದ್ದು ಆನ್ಲೈನ್ ತರಗತಿಗೆ ಹಾಜರಾಗಲು ಇಲ್ಲಿನ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಇನ್ನು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ತರಗತಿ ಇರುವ ಕಾರಣದಿಂದ ಕುಳಿತುಕೊಳ್ಳಲು ಕುರ್ಚಿಗಳನ್ನೂ ಹೊತ್ತೊಯ್ಯುತ್ತಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಇರದ ಕಾರಣದಿಂದಾಗಿ ಈ ವಿದ್ಯಾರ್ಥಿಗಳ ಆನ್ಲೈನ್ ತರಗತಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಮೊಬೈಲ್ ನೆಟ್ವರ್ಕ್ಗಾಗಿ ತಮ್ಮ ನಿವಾಸಗಳಿಂದ ಕಾಡಿನ ಹಾದಿಯಲ್ಲಿ ಒಂದು, ಎರಡು ಕಿಲೋಮೀಟರ್ ದೂರ ಬಂದು ಬಸ್ ನಿಲ್ದಾಣದಲ್ಲಿ ಆನ್ಲೈನ್ ತರಗತಿಗೆ ಹಾಜರಾಗುವ ಈ ವಿದ್ಯಾರ್ಥಿಗಳು ತರಗತಿ ಮುಗಿದ ಬಳಿಕ ಮನೆಗೆ ಮರಳುತ್ತಾರೆ. ಈ ಭಾಗದಲ್ಲಿ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸೇರಿದಂತೆ ಯಾವ ನೆಟ್ವರ್ಕ್ಗಳೂ ಕೂಡಾ ಇಲ್ಲದ ಕಾರಣದಿಂದಾಗಿ ವಿದ್ಯಾರ್ಥಿಗಳು ಆನ್ಲೈನ್ ತರಗತಿ ಪಡೆಯಲು ಈ ಪಾಡು ಪಡೆಬೇಕಾಗಿದೆ.