ಸುಳ್ಯ, ಏ 25: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ನನ್ನನ್ನು ನಾಯಕರು ಬರಹೇಳಿದ್ದರು. ಆದರೆ ಬಂದು ನೋಡಿದಾಗ ಬೇರೆ ಅಭ್ಯರ್ಥಿಗೆ ಬಿ ಫಾರಂ ಕೊಟ್ಟು ನಾಮಪತ್ರ ಸಲ್ಲಿಸಿಯೂ ಆಗಿತ್ತು ಎಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ನಿವೃತ್ತ ಫ್ರೊಫೆಸರ್ ಎಚ್.ಎಲ್ ವೆಂಕಟೇಶ್ ಅಳಲು ತೋಡಿಕೊಂಡಿದ್ದಾರೆ.
ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 1983ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಬಳಿಕ ರಾಮಕೃಷ್ಣ ಹೆಗಡೆ ಸರಕಾರವಿದ್ದಾಗ ಭೂ ನ್ಯಾಯ ಮಂಡಳಿಯ ಈ ಭಾಗದ ಸದಸ್ಯನೂ ಆಗಿದ್ದೆ. ನಂತರ ನನಗೆ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಫ್ರೊಫೆಸರ್ ಹುದ್ದೆ ದೊರೆತದ್ದರಿಂದ ರಾಜಕೀಯ ಜೀವನ ಕೊನೆಗೊಳಿಸಿದೆ. ನಿವೃತ್ತಿಯ ಬಳಿಕ ಮತ್ತೆ ಜೆಡಿಎಸ್ ನಲ್ಲಿ ಸಕ್ರಿಯನಾದೆ. ಈ ಬಾರಿ ಈ ಕ್ಷೇತ್ರಕ್ಕೆ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಸುಳ್ಯದಲ್ಲೇ ಮನೆ ಮಾಡಿ ಕ್ಷೇತ್ರ ಕಾರ್ಯವನ್ನೂ ಮಾಡಿದ್ದೆ. ಆದರೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಜೆಡಿಎಸ್ ಮತ್ತು ಬಿಎಸ್ಪಿ ಹೊಂದಾಣಿಕೆಯ ಕಾರಣದಿಂದ ಈ ಕ್ಷೇತ್ರ ಬಿಎಸ್ಪಿ ಪಕ್ಷಕ್ಕೆ ಬಿಟ್ಟುಕೊಡಲಾಯಿತು. ಇದರಿಂದ ನಿರಾಸೆ ಅನುಭವಿಸಿದೆ. ಪಕ್ಷೇತರನಾಗಿ ಸ್ಪರ್ಧಿಸಲು ಹಲವರು ಹೇಳಿದರೂ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ . ಈ ವೇಳೆ ಬಿಎಸ್ಪಿ ನಾಯಕರು ನನ್ನನ್ನು ಸಂಪರ್ಕಿಸಿ ಅವರ ಪಕ್ಷದಿಂದ ಸ್ಪರ್ಧಿಸಲು ಕೋರಿದರು, ಹಿತೈಷಿಗಳ ಸಲಹೆ ಪಡೆದು ಸ್ಪರ್ಧಿಸಲು ಒಪ್ಪಿದೆ. ನಾಯಕರ ಮಾತಿನಂತೆ 20,000 ಪಡೆದು ಪಕ್ಷದ ಸದಸ್ಯತ್ವ ಸ್ವೀಕರಿಸಿದೆ. ಸೋಮವಾರ ಮಧ್ಯಾಹ್ನ ನಾಮಪತ್ರ ಸಲ್ಲಿಕೆಗೆ ಬರುವಂತೆಯೂ ಬಿ ಫಾರಂ ಕೊಡುವುದಾಗಿಯೂ ನಾಯಕರು ತಿಳಿಸಿದ್ದರು. ಆದರೆ ಬರುವ ವೇಳೆಗಾಗಲೇ ರಘು ಧರ್ಮಸೇನಾ ಎಂಬವರಿಗೆ ಬಿ ಫಾರಂ ಕೊಟ್ಟು ನಾಮಪತ್ರ ಸಲ್ಲಿಸಿಯೂ ಆಗಿತ್ತು. ಈ ರೀತಿ ನಂಬಿಕೆ ದ್ರೋಹ ಮಾಡುವುದು ಸರಿಯಲ್ಲ. ಕೂಡಲೇ ಬಿಎಸ್ಪಿಗೆ ರಾಜೀನಾಮೆ ನೀಡಿ ಜೆಡಿಎಸ್ ಸೇರುತ್ತೇನೆ. ನನ್ನ ರಾಜಕೀಯ ಗುರುಗಳಾದ ಜೀವಿಜಯ ಅವರ ಗೆಲುವಿಗೆ ದುಡಿಯುತ್ತೇನೆ ಎಂದು ವೆಂಕಟೇಶ್ ಹೇಳಿದರು.